ಬಳ್ಳಾರಿ: ಲಾಕ್ ಡೌನ್ ನಡುವೆಯೂ ಬಸವ ಜಯಂತಿ (ಅಕ್ಷಯ ತೃತೀಯ) ನಿಮಿತ್ತ ಗಣಿ ಜಿಲ್ಲೆಯಲ್ಲಿ ನಾಲ್ಕು ಬಾಲ್ಯವಿವಾಹ ಪ್ರಕರಣಗಳು ನಡೆಸಿರುವುದು ಬೆಳಕಿಗೆ ಬಂದಿದೆ.
ನಿನ್ನೆ ಬೆಳಗಿನ ಜಾವ 5 ಗಂಟೆಗೆಯೇ ಮದುವೆ ಕಾರ್ಯವನ್ನು ಮಾಡಿ ಮುಗಿಸಲಾಗಿದ್ದು, ಉಳಿದಂತೆ ಬಳ್ಳಾರಿ ಗಾಂಧಿನಗರ ಮೂಲದ 16 ವರ್ಷದ ಬಾಲಕಿಯನ್ನು ಮದುವೆ ಮಾಡಲು ಮುಂದಾಗಿದ್ದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಧಾವಿಸಿ ವರನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದಲ್ಲದೇ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ನಡೆಯಬೇಕಿದ್ದ ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆಹಿಡಿದಿದ್ದಾರೆ.
ನಾನಾ ಕಟ್ಟುಕಥೆ: ಈ ಬಾಲ್ಯ ವಿವಾಹಗಳನ್ನ ತಡೆಯಲು ಹೋಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ವಧು- ವರರ ಕಡೆಯವರು ನಾನಾ ಕಟ್ಟುಕಥೆಗಳನ್ನ ಹೇಳಿದ್ದಾರೆ. ಬಳ್ಳಾರಿಯ ಗಾಂಧಿನಗರ ಮೂಲದ 16 ವರ್ಷದ ಬಾಲಕಿಯ ಕಡೆಯವರು ಪ್ರೀತಿ, ಪ್ರೇಮದ ಮಾತುಗಳನ್ನಾಡಿದ್ದಾರೆ.
ಇಬ್ಬರು ಬಾಲಕಿಯರು ಶಾಂತಿಧಾಮದಲ್ಲಿ: ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹಾಗೂ ಬಳ್ಳಾರಿ ಗಾಂಧಿನಗರ ಮೂಲದ ಇಬ್ಬರು ಬಾಲಕಿಯರನ್ನ ರಕ್ಷಣೆ ಮಾಡಿ ನಗರದ ಶಾಂತಿಧಾಮದಲ್ಲಿರಿಸಲಾಗಿದೆ. ಅಲ್ಲದೇ ಮದುವೆಯಾದ ನಾಲ್ಕು ಮಂದಿ ವರರ ವಿರುದ್ಧ ಕಾನೂನು ರೀತಿಯಾ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ ತಿಳಿಸಿದ್ದಾರೆ.