ಮೈಸೂರು: ಕೆರೆಯಲ್ಲಿ ಈಜಲು ಹೋದ ನಾಲ್ಕು ಬಾಲಕರು ನೀರುಪಾಲಾಗಿರುವ ಘಟನೆ ಮೈಸೂರಿನ ಎಚ್.ಡಿ ಕೋಟೆ ತಾಲೂಕಿನ ಜಿ.ಜಿ.ಕಾಲೊನಿಯಲ್ಲಿ ನಡೆದಿದೆ.
ಕಿರಣ್ (15), ಚೆಂದಗಣ್ಣ (13), ರೋಹಿತ್(10) ಯಶ್ವಂತ್(10) ಮೃತ ಬಾಲಕರು. ಶಿವರಾತ್ರಿ ಹಬ್ಬದ ನಿಮಿತ್ತ ಶಾಲೆಗೆ ರಜೆಯಿದ್ದ ಕಾರಣ ನಾಲ್ವರು ಬಾಲಕರು, ತಮ್ಮ ಕಾಲೊನಿಯಿಂದ 1 ಕಿಲೋಮೀಟರ್ ದೂರವಿರುವ ಕೆರೆಗೆ ಸಂಜೆ ನಾಲ್ಕು ಗಂಟೆಗೆ ಈಜಲು ಹೋಗಿದ್ದರು.
ಬಾಲಕರು ಸುಮಾರು 2 ಗಂಟೆಗಳ ಕಾಲ ಕೆರೆಯಲ್ಲಿ ಈಜಾಡಿದ್ದಾರೆ. ಕೆರೆ ಮಧ್ಯದಲ್ಲಿ ಆಳವಿದ್ದ ಕಡೆ ಬಾಲಕನೊಬ್ಬ ಈಜಿಕೊಂಡು ಹೋಗಿದ್ದಾನೆ. ಈ ವೇಳೆ, ಸುಸ್ತಾಗಿ ನಿಸ್ಸಾಯಕನಾಗಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಒಬ್ಬರಂತೆ ಒಬ್ಬರು ಹೋದ ಬಾಲಕರೂ ಮೃತಪಟ್ಟಿದ್ದಾರೆ.
ನಾಲ್ವರ ಬಾಲಕರ ಮೃತದೇಹವನ್ನು ಗ್ರಾಮಸ್ಥರು ಹೊರತೆಗೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಎಚ್.ಡಿ.ಕೋಟೆ ಠಾಣೆಯಲ್ಲಿ ದೂರು ದಾಖಲಾಗಿದೆ.