ಬೆಂಗಳೂರು: ಕಡಿಮೆ ಬೆಲೆಗೆ ಫ್ಲ್ಯಾಟ್ ಖರೀದಿಸಿದರೆ ತಿಂಗಳಿಗೆ ಸಾಕಷ್ಟು ಬಾಡಿಗೆ ಆದಾಯ ಬರುತ್ತದೆ ಎಂಬ ಲೆಕ್ಕಾಚಾರದೊಂದಿಗೆ ಹೋಲ್ಸೇಲ್ ಆಗಿ ಫ್ಲ್ಯಾಟ್ಗಳ ಖರೀದಿಗಾಗಿ ಮುಂದಾಗಿದ್ದ ಟೆಕ್ಕಿಗೆ 2.45 ಕೋಟಿ ರೂ. ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಯೋಗೇಶ್ವರ್ ರೆಡ್ಡಿ ಹಣ ಕಳೆದುಕೊಂಡ ಟೆಕ್ಕಿ. ಇವರು ಮೂಲತಃ ಅನಂತಪುರದವರಾಗಿದ್ದು, ವಿದೇಶದಲ್ಲಿ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. 2014 ರಿಂದ ವಿಜಯನಗರದಲ್ಲಿ ವಾಸಿಸುತ್ತಿದ್ದಾರೆ. ಶ್ರೀಮಂತರಾಗಿದ್ದ ಯೋಗೇಶ್ವರ್ ರೆಡ್ಡಿ, ಬೆಂಗಳೂರಿನಲ್ಲಿ ಕಡಿಮೆ ಬೆಲೆಯಲ್ಲಿ ಫ್ಲ್ಯಾಟ್ಗಳನ್ನು ಖರೀದಿಸಿ ಬಾಡಿಗೆಗೆ ನೀಡಿದರೆ ಹಣ ಬರುತ್ತೆ ಎಂಬ ಲೆಕ್ಕಾಚಾರದೊಂದಿಗೆ ಫ್ಲ್ಯಾಟ್ ಖರೀದಿಗಾಗಿ ಶೋಧ ನಡೆಸುತ್ತಿದ್ದರು.
ಫ್ಲ್ಯಾಟ್ಗಳ ತಲಾಶೆ ನಡೆಯುತ್ತಿರುವಾಗ ಸ್ನೇಹಿತರ ಮುಖಾಂತರ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಶಿರೀಶ್ ರೆಡ್ಡಿ ಹಾಗೂ ಜಮುನಾ ಶಿರೀಶ್ ರೆಡ್ಡಿ ದಂಪತಿ ಪರಿಚಯವಾಗಿದೆ. ಇವರಿಗೆ ಫ್ಲ್ಯಾಟ್ ಖರೀದಿ ವಿಚಾರವಾಗಿ ಮಾತನಾಡಿ, ತಲಾ ಒಂದು ಫ್ಲ್ಯಾಟ್ಗೆ 25ರಿಂದ 30 ಲಕ್ಷದಂತೆ ಒಟ್ಟು 2.70 ಕೋಟಿ ರೂ. ದಂಪತಿಗೆ ಯೊಗೇಶ್ವರ್ ಹಣ ನೀಡಿದ್ದಾರೆ.
10 ಫ್ಲ್ಯಾಟ್ಗಳ ಪೈಕಿ ಮೂರು ಫ್ಲ್ಯಾಟ್ ನೀಡಿ ಉಳಿದ ಫ್ಲ್ಯಾಟ್ಗಳನ್ನು ರಿಜಿಸ್ಟರ್ ಮಾಡಿಕೊಡಿಸುವುದಾಗಿ ಹೇಳಿ ದಂಪತಿ 2.45 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಿ ಬಾಣಸವಾಡಿ ಪೊಲೀಸ್ ಠಾಣೆಗೆ ಯೋಗೇಶ್ವರ್ ರೆಡ್ಡಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.