ಭಟ್ಕಳ: ತಾಲೂಕಿನ ಮೂರಿನಕಟ್ಟೆ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಶನಿವಾರದಂದು ರಾತ್ರಿ ಶಾಸಕ ಸುನೀಲ್ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಎರಡು ಕೋಮಿನವರ ಸಭೆಯಲ್ಲಿ ಭಾರಿ ಚರ್ಚೆ ನಡೆದಿದೆ. ಅಂತಿಮವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಒಂದು ಕೋಮಿನವರು ಸಭೆಯಿಂದ ಹೊರ ನಡೆದಿದ್ದಾರೆ.
ಸಭೆಯ ಆರಂಭದಲ್ಲಿ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಮಾತನಾಡಿ, ದಕ್ಷಿಣ ಕನ್ನಡದಿಂದ ಬರುವಂತಹ ಮಾರಿ ಹೊರೆ ಇದಾಗಿದ್ದು ತಾಲೂಕಿನ ಪುರವರ್ಗ, ಬಂದರ ಕಡೆಯಿಂದ ಜನರು ತಂದಿರುವ ಹೊರೆಯನ್ನು ಮೂರಿನಕಟ್ಟೆಯಲ್ಲಿ ಹಾಕುತ್ತಾರೆ. ಅಲ್ಲಿಂದ ಒಂದೊಂದು ಕಟ್ಟೆಗೆ ಸ್ಥಳಾಂತರಗೊಂಡು ಶಿರಸಿಗೆ ಹೋಗಲಿದೆ. ಅಲ್ಲಿಂದ ಆಯಾ ಊರಿನ ಗ್ರಾಮಸ್ಥರು ಪೂಜೆ ಸಲ್ಲಿಸಿ ಅದನ್ನು ಮುಂದಿನ ಸ್ಥಳಕ್ಕೆ ಇಟ್ಟು ಬರುತ್ತಾರೆ. ಮೂರಿನಕಟ್ಟೆಯೂ ಅಂತಹ ಒಂದು ಕಟ್ಟೆಯಾಗಿದ್ದು, ಇದು ತಲತಲಾಂತರಗಳಿಂದ ನಡೆದುಬಂದ ಸಂಪ್ರದಾಯ. ಈಗ ರಸ್ತೆ ಅಗಲೀಕರಣದಿಂದ ಜಾಗ ಹೋಗಲಿದ್ದು, ಒಂದೇ ಅಲ್ಲಿಯೇ ಸ್ಥಳಾವಕಾಶ ನೀಡಿ ಇಲ್ಲವಾದರೆ ಬೇರೆ ಜಾಗ ನೀಡಿ ಅಥವಾ ಯಥಾಸ್ಥಿತಿ ಕಾಪಾಡಿ ರಸ್ತೆ ಅಗಲೀಕರಣವನ್ನು ತಿರುವುಗೊಳಿಸಿ ಕಾಮಗಾರಿ ನಡೆಸಿರಿ ಎಂದು ತಾಕೀತು ಮಾಡಿದರು.
ಇದಕ್ಕೆ ತಂಝೀಂನ ಸದಸ್ಯ ಹಾಸೀಮ್ ಎಜೆ ಪ್ರತಿಕ್ರಿಯಿಸಿದ್ದು, ಇಲ್ಲಿ ಕಟ್ಟೆ ಇಲ್ಲ. ಹೊರೆ ತಂದು ಇರಿಸುವುದು ನಮ್ಮ ಗಮನಕ್ಕೂ ಇದೆ. ಹಾಗಂತ ಅದರ ಹೆಸರಲ್ಲಿ ಕಟ್ಟೆ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.
ನ್ಯಾಯವಾದಿ ರಾಜೇಶ ನಾಯ್ಕ ಮಾತನಾಡಿ, ಕಾಲಕಾಲಕ್ಕೆ ಬದಲಾಗಿ ಬರುವ ಅಧಿಕಾರಿಗಳು ಇಂತಹ ಸನ್ನಿವೇಶ ಬಂದಾಗ ಕಟ್ಟೆ ಇದ್ದ ಬಗ್ಗೆ ಪುರಾವೆ ಕೇಳುತ್ತಾರೆ. ಈಗಲೂ ಅಧಿಕಾರಿಗಳು ಅದನ್ನೇ ಕೇಳುತ್ತಿದ್ದಾರೆ. ಈಗ ಕಟ್ಟೆ ಕಟ್ಟದಿದ್ದರೆ ಮುಂದೆ ನಮ್ಮ ಧಾರ್ಮಿಕ ಸ್ಥಳವನ್ನೆ ಕಳೆದುಕೊಳ್ಳಬೇಕಾಗುತ್ತದೆ. ಮತ್ತು ನಮ್ಮ ಧಾರ್ಮಿಕ ಜಾಗ ನಮಗೆ ಬೇಕೇ ಬೇಕು ನಾವು ಉಳಿಸಿಕೊಳ್ಳಲಿದ್ದೇವೆ ಎಂದರು.
ಇದಕ್ಕೆ ತಂಝೀಂ ಅಧ್ಯಕ್ಷ ಎಸ್. ಎಂ. ಪರ್ವೇಜ್ ಹಾಗೂ ಇನಾಯಿತುಲ್ಲಾ ಶಾಬಂದ್ರಿ ಮಾತನಾಡಿಮ, ಹಿಂದಿನಿಂದಲೂ ಇಲ್ಲಿ ಧಾರ್ಮಿಕ ಕಾರ್ಯ ನಡೆಯುವ ಬಗ್ಗೆ ನಮಗೆ ಅರಿವಿದೆ. ಹಾಗಂತ ಬೇರೆಯವರ ಮನೆ ಮುಂದೆ ಕಟ್ಟೆ ಕಟ್ಟಿ ಪೂಜೆ ಮಾಡುವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಬೇಕಾದರೆ ಇದ್ದ ಸ್ಥಳದಲ್ಲೇ ಕಟ್ಟೆ ನಿರ್ಮಿಸಿ ಹೆದ್ದಾರಿಯನ್ನು ಪಕ್ಕದಲ್ಲಿ ನಿರ್ಮಾಣ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಪಿಐ ದಿವಾಕರ್ ಮಾತನಾಡಿ, ಕಟ್ಟೆಯನ್ನು ಯಾವುದೇ ಖಾಸಗಿ ಜಾಗದಲ್ಲಿ ನಿರ್ಮಾಣ ಮಾಡುವುದಿಲ್ಲ. ಬದಲಾಗಿ ಹೆದ್ದಾರಿ ಪಕ್ಕದಲ್ಲೇ ಇರುವ ಟೆಲಿಫೋನ್ ಕಂಬದ ಪಕ್ಕ ನಿರ್ಮಾಣಕ್ಕೆ ಅವಕಾಶ ನೀಡುತ್ತೇವೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇನಾಯಿತುಲ್ಲಾ ಶಾಬಂದ್ರಿ ಖಾಸಗಿ ಮನೆ ಮುಂದೆ ಕಟ್ಟೆ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಅದನ್ನು ರಂಗಿನಕಟ್ಟೆಯಲ್ಲಿರುವ ಗಣಪತಿ ದೇವಸ್ಥಾನದ ಹತ್ತಿರ ಸ್ಥಾಪನೆ ಮಾಡಿಕೊಳ್ಳಿ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸುನೀಲ ನಾಯ್ಕ 'ಇಲ್ಲಿ ಕಟ್ಟೆ ನಿರ್ಮಾಣ ಮಾಡಿ ಯಾವುದೇ ಪೂಜೆ ಕೈಂಕರ್ಯ ಮಾಡುವುದಿಲ್ಲ. ಬದಲಾಗಿ ಅಮ್ಮನವರ ಹೊರೆಯನ್ನು ತಂದಿಟ್ಟು ಮುಂದಿನ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಇದಕ್ಕೆ ಎಲ್ಲರೂ ಅವಕಾಶ ನೀಡಬೇಕು ಎಂದರು.
ಒಂದು ಹಂತದಲ್ಲಿ ಶಾಂತವಾಗಿದ್ದ ಸಭೆಯಲ್ಲಿ ಗದ್ದಲ ಗಲಾಟೆ ಶುರುವಾಗಿದ್ದು, ವಾದ ವಿವಾದ ನಂತರ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕಟ್ಟೆಯನ್ನು ಸ್ಥಳಾಂತರ ಮಾಡಲು ಉಭಯತರರು ಒಪ್ಪಿಕೊಂಡಿದ್ದರು. ಆದರೆ ಆ ಸ್ಥಳದಲ್ಲಿ ಕಟ್ಟೆ ನಿರ್ಮಾಣ ಮಾಡಿ ನಾಮಫಲಕ ಹಾಕದಂತೆ ತಂಝೀಂನವರು ವಿರೋಧಿಸಿದರು.
ಇದರಿಂದ ಕೋಪಗೊಂಡ ಕೃಷ್ಣ ನಾಯ್ಕ 'ಏನೇ ಆದರೂ ನಾವು ಆ ಸ್ಥಳದಲ್ಲಿ ಕಟ್ಟೆ ನಿರ್ಮಾಣ ಮಾಡಿಯೇ ತೀರುತ್ತೇವೆ. ಯಾರೇ ಅಡ್ಡ ಬಂದರು ಕಟ್ಟೆ ನಿರ್ಮಾಣ ಮಾಡಲಿದ್ದೇವೆ. ನಿಮ್ಮ ಅವಧಿಯಲ್ಲಿ ಕಟ್ಟೆ ನಿರ್ಮಾಣ ಮಾಡದಿದ್ದರೆ ನಮಗೆ ಹೇಗೆ ಮಾಡಬೇಕು ಎಂದು ತಿಳಿದಿದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸರ್ಕಾರರದಿಂದ ಅನುಮತಿ ಸಿಕ್ಕಿದ್ದಲ್ಲಿ ಮಾರಿನಕಟ್ಟೆಯ ಕಟ್ಟೆ ನಿರ್ಮಾಣ ಮಾಡಿಯೇ ತೀರಲಿದ್ದೇವೆ ಎಂದು ಸವಾಲು ಹಾಕಿದರು.
ಇದರಿಂದ ಆಕ್ರೋಶಗೊಂಡ ಮುಸ್ಲಿಂ ಯೂಥ್ ಅಧ್ಯಕ್ಷ ಅಜೀಜು ರೆಹಮಾನ್, ಸರ್ಕಾರದಿಂದ ಅನುಮತಿ ಪಡೆದು ಕಟ್ಟೆ ಹೇಗೆ ನಿರ್ಮಾಣ ಮಾಡಲಿದ್ದೀರಿ ಎಂದು ನಾವು ನೋಡುತ್ತೇವೆಂದು ಮರುಸವಾಲು ಹಾಕಿದರು. ಇದರಿಂದ ಮಾರಿನಕಟ್ಟೆ ಜಾಗದ ಪರವಾಗಿದ್ದ ಪ್ರಮುಖ ಕೃಷ್ಣ ನಾಯ್ಕ ಆಸರಕೇರಿ ಆಕ್ರೋಶಕೊಂಡು ನಮಗೆ ಸವಾಲು ಹಾಕಿದ್ದಲ್ಲಿ ಹೇಗೆ ಕಟ್ಟೆ ಕಟ್ಟಬೇಕೆಂದು ನಮಗೆ ಗೊತ್ತಿದೆ ಎಂದು ಸಭೆಯಿಂದ ಹೊರ ನಡೆದರು.
ಇದರಿಂದ ಎರಡು ಕೋಮಿನ ನಡುವೆ ಕೆಲಕಾಲ ಕೋಲಾಹಲ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಅಧಿಕಾರಿಗಳು ಎರಡೂ ಕಡೆಯವರನ್ನು ಸಂತೈಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕೊನೆಗೆ ಶಾಸಕರು ಸೇರಿದಿಂತೆ ಕಟ್ಟೆಯ ಪರವಾದ ಗುಂಪಿನವರು ತಮ್ಮ ಸಂಘಟನೆಯ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿ ಸಭಾತ್ಯಾಗ ಮಾಡಿದರು.