ನವದೆಹಲಿ: ಮಕ್ಕಳ ಭವಿಷ್ಯದ ಬಗ್ಗೆ ನಡೆದ ಜಗಳ ಹಿಂಸಾಚಾರಕ್ಕೆ ತಿರುಗಿ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ದೆಹಲಿಯ ಮದಿಪುರದ ಜೆ.ಜೆ. ಕಾಲೋನಿಯಲ್ಲಿ ನಡೆದಿದೆ.
ಬೀದಿ ಬದಿ ವ್ಯಾಪಾರಿಯಾಗಿರುವ ರೈಸುಲ್ ಅಜಮ್ (34), ತನಗಿಂತ ಐದು ವರ್ಷ ಹಿರಿಯಳಾದ ಗುಲ್ಶನ್ (39) ಎಂಬಾಕೆಯನ್ನು ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ. ಇವರಿಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಅಜಮ್ಗೆ ಮೊದಲನೇ ಪತ್ನಿಯ ಮೂರು ಮಕ್ಕಳು ಹಾಗೂ ಗುಲ್ಶನ್ಗೆ ಮೊದಲನೇ ಪತಿಯ ಆರು ಮಕ್ಕಳಿದ್ದಾರೆ. ಇದೀಗ ದಂಪತಿಗೆ ಒಟ್ಟು 9 ಮಕ್ಕಳಿದ್ದು, ಇವರ ಭವಿಷ್ಯದ ಕುರಿತು ಚರ್ಚೆ, ವಾದ-ವಿವಾದಗಳು ಪ್ರಾರಂಭವಾಗಿದ್ದವು. ಇದರಿಂದ ತಾಳ್ಮೆ ಕಳೆದುಕೊಂಡಿರುವ ಅಜಮ್, ಹೆಂಡತಿಯ ತಲೆಗೆ ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾನೆ.
ಜಗಳ ತಾರಕಕ್ಕೇರುತ್ತಿದ್ದಂತೆಯೇ ಅಜಮ್, ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಆದರೆ ಪೊಲೀಸರು ಮನೆಗೆ ಬರುವಷ್ಟರಲ್ಲಿ ಕೊಲೆಗೈದಿದ್ದು, ತಾನೇ ಶರಣಾಗಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಇನ್ನು ಘಟನೆ ನಡೆದಿರುವ ಮದಿಪುರದ ಜೆ.ಜೆ. ಕಾಲೋನಿಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಅಧಿಕವಿದ್ದು, ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದೆ.