ಮೈಸೂರು: ಕಳೆದ ವಾರ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜುಲೈ 21 ರಂದು ಮಂಗಳವಾರ ಹೆಬ್ಬಾಳದಲ್ಲಿ ದರ್ಶನ್ (20) ಎಂಬ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹೆಬ್ಬಾಳ ಪೊಲೀಸರು ಇಂದು ಕಿರಣ್ ಮತ್ತು ದಿಲೀಪ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಯಾದ ದರ್ಶನ್ ಮೈಸೂರು ಹೋಟೆಲ್ ಕಾಂಪ್ಲೆಕ್ಸ್ ನಲ್ಲಿರುವ ಪಾರ್ಲರ್ ಅಂಗಡಿಗಳಿಗೆ ಗ್ರಾಹಕರನ್ನು ಕರೆದುಕೊಂಡು ಬಂದು ಕಮಿಷನ್ ಪಡೆಯುತ್ತಿದ್ದನು. ಈ ವಿಚಾರವಾಗಿ ವೈಮನಸ್ಸು ಉಂಟಾಗಿ ಗಲಾಟೆ ನಡೆದು ದರ್ಶನ್ ಎಂಬುವನನ್ನು ಕಿರಣ ಮತ್ತು ದಿಲೀಪ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಇನ್ನು ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.