ಕೊಪ್ಪಳ: ತಾಲೂಕಿನ ದೇವಲಾಪುರ ಗ್ರಾಮದ ಸೀಮಾದಲ್ಲಿ ಕುರಿಗಳನ್ನು ಕಳುವು ಮಾಡಿಕೊಂಡು ಪರಾರಿಯಾಗಿದ್ದ ನಾಲ್ವರು ಖದೀಮರನ್ನು ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು 24 ಗಂಟೆಗಳಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಳಗವಾಡಿಯ ಅಣ್ಣಪ್ಪ ಹರಿಣಶಿಕಾರಿ, ತಿರ್ಲಾಪುರದ ರವಿ ಮದನ್ನವರ, ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮಾಳೆಕೊಪ್ಪದ ಮನೋಜ ಹರಿಣಶಿಕಾರಿ, ಕಲ್ಲಪ್ಪ ಹರಿಣಶಿಕಾರಿ ಎಂಬ ನಾಲ್ವರನ್ನು ಬಂಧಿಸಿದ್ದಾರೆ.
ಚಿಲವಾಡಗಿ ಗ್ರಾಮದ ಮಲ್ಲೇಶ ಕಂಬಳಿ ಎಂಬುವರ ಹೊಲದಲ್ಲಿನ 28 ಕುರಿಗಳು ಹಾಗೂ ಎರಡು ಟಗರುಗಳನ್ನು ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಗ್ರಾಮೀಣ ಠಾಣೆಯ ಪೊಲೀಸರು, ಖದೀಮರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬಂಧಿತರಿಂದ ಒಂದು ಟಾಟಾ ಏಸ್ ವಾಹನ, ಒಟ್ಟು 2.44 ಲಕ್ಷ ರೂಪಾಯಿ ಮೌಲ್ಯದ 36 ಕುರಿಗಳು, 2 ಟಗರು, 12 ಮೇಕೆಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.