ಹಥ್ರಾಸ್ (ಉತ್ತರ ಪ್ರದೇಶ): ಹಥ್ರಾಸ್ ಪ್ರಕರಣದ ನಾಲ್ವರು ಆರೋಪಿಗಳ ಪರ ವಕೀಲರಾಗಿರುವ ಎ.ಪಿ.ಸಿಂಗ್ ಮತ್ತು ಕ್ಷತ್ರಿಯ ಮಹಾಸಭಾ ಸದಸ್ಯ ಮನ್ವೇಂದ್ರ ಸಿಂಗ್ ಇಂದು ಆರೋಪಿಗಳ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ.
ಉತ್ತರ ಪ್ರದೇಶದ ಹಥ್ರಾಸ್ಗೆ ಬಂದ ಎ.ಪಿ.ಸಿಂಗ್ ಹಾಗೂ ಮನ್ವೇಂದ್ರ ಸಿಂಗ್, ಘಟನೆಗೆ ಸಂಬಂಧಿಸಿದ ವಿವರಗಳು ಮತ್ತು ಪುರಾವೆಗಳನ್ನು ಸಂಗ್ರಹಿಸಲು ಆರೋಪಿಗಳ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ.
ಹಥ್ರಾಸ್ ಪ್ರಕರಣದಲ್ಲಿ ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ದುರುಪಯೋಗಪಡಿಸಲಾಗಿದೆ. ರಾಜಕಾರಣಿಗಳು ಈ ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಸಿಂಗ್, ಇಲ್ಲಿ ಯಾವುದೇ ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರ ನಡೆದಿಲ್ಲ. ಇದನ್ನು ನ್ಯಾಯಯುತವಾಗಿ ತನಿಖೆ ಮಾಡಬೇಕು. ನನ್ನ ಕಕ್ಷಿದಾರರಿಗೆ ನಾನು ನ್ಯಾಯ ಒದಗಿಸಿಕೊಡುತ್ತೇನೆ. ನಾನು ಯಾವುದೇ ಶುಲ್ಕವಿಲ್ಲದೆ ಪ್ರಕರಣದ ವಿರುದ್ಧ ಹೋರಾಡುತ್ತಿಲ್ಲ. ಕ್ಷತ್ರಿಯ ಮಹಾಸಭಾ ನನ್ನ ಶುಲ್ಕವನ್ನು ಪಾವತಿಸಲಿದೆ ಎಂದು ಈ ವೇಳೆ ತಿಳಿಸಿದ್ದಾರೆ.
2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಪರ ವಕೀಲರಾಗಿದ್ದ ಸಿಂಗ್, ಇದೀಗ ಉತ್ತರ ಪ್ರದೇಶದ ಹಥ್ರಾಸ್ ಪ್ರಕರಣದ ನಾಲ್ವರು ಆರೋಪಿಗಳ ಪರ ವಾದ ಮಂಡನೆ ಮಾಡಲು ಮುಂದಾಗಿದ್ದಾರೆ. ಹಥ್ರಾಸ್ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ಸಂದೀಪ್ ಸಿಂಗ್, ಹಥ್ರಾಸ್ ಪೊಲೀಸ್ ವರಿಷ್ಠಾಧಿಕಾರಿಗೆ ಬರೆದ ಪತ್ರದ ಆಧಾರದ ಮೇಲೆ ಸಿಂಗ್ ನಿನ್ನೆ ಹಥ್ರಾಸ್ ಪ್ರಕರಣವನ್ನು ಇದೊಂದು 'ಮರ್ಯಾದಾ ಹತ್ಯೆ' ಎಂದು ಆರೋಪಿಸಿದ್ದರು.
ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕಾಮುಕರು, ಆಕೆ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ದೆಹಲಿಯ ಸಫ್ತರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಮೃತದೇಹವನ್ನು ಸಂತ್ರಸ್ತೆಯ ಕುಟುಂಬಕ್ಕೆ ಹಸ್ತಾಂತರಿಸದೇ ಇತ್ತೀಚೆಗೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.