ಗಾಜಿಯಾಬಾದ್ (ಉತ್ತರ ಪ್ರದೇಶ): ದೆಹಲಿ - ಉತ್ತರ ಪ್ರದೇಶ ಗಡಿ ಭಾಗವಾದ ಗಾಜಿಯಾಬಾದ್ನಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಧರಣಿ ಸ್ಥಳದಲ್ಲಿ ಸ್ಥಾಪಿಸಲಾದ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರೈತನ ಮೃತದೇಹ ಪತ್ತೆಯಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
ನಿನ್ನೆಯಷ್ಟೇ ಗಾಜಿಪುರ ಗಡಿಯಲ್ಲಿ ಬಾಗಪತ್ ಜಿಲ್ಲೆಯ ಚೌಧರಿ ಗಲಾನ್ ಸಿಂಗ್ (57) ಎಂಬ ರೈತ ಸಾವನ್ನಪ್ಪಿದ್ದನು. ಪ್ರತಿಭಟನೆ ವೇಳೆ ಸುಮಾರು 20 ರೈತರು ಪ್ರಾಣಬಿಟ್ಟಿದ್ದಾರೆ.
ಇದನ್ನೂ ಓದಿ: ಗಾಜಿಪುರ ಗಡಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟಿಸುತ್ತಿದ್ದ ರೈತ ಸಾವು
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ರೈತರು ಗಡಿಭಾಗಗಳಲ್ಲಿ ಕಳೆದ 37 ದಿನಗಳಿಂದ ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿದ್ದಾರೆ. ಆರು ಬಾರಿ ರೈತ ಮುಖಂಡರೊಂದಿಗೆ ಸರ್ಕಾರ ಮಾತುಕತೆ ನಡೆಸಿದ್ದು, ಸಫಲವಾಗದ ಕಾರಣ ರೈತರು ತಮ್ಮ ಧರಣಿ ಮುಂದುವರೆಸಿದ್ದಾರೆ. ನಾಳೆ ಮತ್ತೊಂದು ಸುತ್ತಿನ ಮಾತುಕತೆ ನಿಗದಿಯಾಗಿದೆ. 6ನೇ ಸಭೆಯಲ್ಲಿ ರೈತರು ಮತ್ತು ಸರ್ಕಾರದ ನಡುವಣ ಮಾತುಕತೆಯಲ್ಲಿ ಎರಡು ವಿಷಯಗಳಲ್ಲಿ ಸಹಮತ ವ್ಯಕ್ತವಾಗಿತ್ತು.