ನವದೆಹಲಿ: ಮಾಲೆಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಮಂಗಳವಾರ ಗಲೋಲ್ಹು ಸ್ಟೇಡಿಯಂನಲ್ಲಿ ಆಯೋಜಿಸಿದ್ದ ವಿಶೇಷ ಯೋಗಾಭ್ಯಾಸ ನಡೆಯುತ್ತಿದ್ದ ಸ್ಥಳಕ್ಕೆ ದುಷ್ಕರ್ಮಿಗಳ ಗುಂಪೊಂದು ನುಗ್ಗಿ ಅಡ್ಡಿಪಡಿಸಿದೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಮಾಲ್ಡೀವ್ಸ್‌ನ ಯುವ, ಕ್ರೀಡೆ ಮತ್ತು ಸಮುದಾಯ ಸಬಲೀಕರಣ ಸಚಿವಾಲಯದ ಸಹಯೋಗದಲ್ಲಿ ಭಾರತೀಯ ರಾಯಭಾರ ಕಚೇರಿಯು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇಂದು ಅಂತಾರಾಷ್ಟ್ರೀಯ ಯೋಗ ದಿನದಂದು ಜಗತ್ತಿನಾದ್ಯಂತ ಭಾರತೀಯ ರಾಯಭಾರಿ ಕಚೇರಿಗಳು ಆಚರಣೆಯಲ್ಲಿ ತೊಡಗಿವೆ.
ಓದಿ: ದೋಣಿಯಲ್ಲಿ ಕುಳಿತು ಯೋಗ ಮಾಡಿದ ಐಟಿಬಿಟಿ ಸೈನಿಕರು!
ಜನರು ಯೋಗಾಭ್ಯಾಸದಲ್ಲಿ ತೊಡಗಿದ್ದ ಗಲೋಲ್ಹು ಸ್ಟೇಡಿಯಂಗೆ ದುಷ್ಕರ್ಮಿಗಳು ನುಗ್ಗುತ್ತಿರುವುದನ್ನು ತೋರಿಸುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ದುಷ್ಕರ್ಮಿಗಳು ಯೋಗ ದಿನಾಚರಣೆಯಲ್ಲಿ ಭಾಗಿಯಾದ ಪ್ರಜೆಗಳ ಮೇಲೆ ಹಲ್ಲೆ ಮಾಡಿದ್ದಾರೆ. ಕ್ರೀಡಾಂಗಣದಲ್ಲಿದ್ದ ಧ್ವಜಗಳನ್ನು ಕಿತ್ತುಹಾಕಿದ್ದಾರೆ. ಅಷ್ಟೇ ಅಲ್ಲ, ಆಹಾರ ಮಳಿಗೆಗಳನ್ನು ನಾಶಪಡಿಸಿ ಅಟ್ಟಹಾಸ ಮೆರೆದಿದ್ದಾರೆ. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ವಿಕೋಪಕ್ಕೆ ತಿರುಗದಂತೆ ತಡೆದಿದ್ದಾರೆ. ಪೊಲೀಸರು ಅಶ್ರುವಾಯು ಸಿಡಿಸಿ ಅವರನ್ನು ಮೈದಾನದಿಂದ ಓಡಿಸಿದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಸೋಲಿಹ್, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಮತ್ತು ಈ ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟ್ವೀಟ್ ಮಾಡುವ ಮೂಲಕ ಭರವಸೆ ನೀಡಿದ್ದಾರೆ.