ನವದೆಹಲಿ: ಇಸ್ರೇಲ್-ಹಮಾಸ್ ಉಗ್ರರ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಹಮಾಸ್ ಸಂಬಂಧಿತ ನೂರಾರು ಖಾತೆಗಳನ್ನು ತೆಗೆದುಹಾಕಲಾಗಿದೆ ಎಂದು ಮೈಕ್ರೋಬ್ಲಾಗಿಂಗ್ ಫ್ಲಾಟ್ಫಾರ್ಮ್ ಎಕ್ಸ್ ಕಂಪನಿಯ ಸಿಇಒ ಲಿಂಗಾ ಯಾಕರಿನೊ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಯುದ್ದ ಆರಂಭವಾದಾಗಿನಿಂದ ಈ ಸಂಬಂಧಿತ ಅಂಶವಿರುವ 10 ಸಾವಿರ ವಿಷಯಗಳನ್ನೂ ತೆಗೆದು ಹಾಕುವ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟಗಳೂ ಸೇರಿದಂತೆ ವಿಶ್ವದೆಲ್ಲೆಡೆ ಕಾನೂನು ಜಾರಿ ವಿನಂತಿಗಳಿಗೆ ನಾವು ಪ್ರತಿಕ್ರಿಯಿಸುವುದನ್ನು ಮುಂದುವರಿಸುತ್ತೇವೆ ಎಂದಿರುವ ಅವರು ಯುರೋಪಿಯನ್ ಒಕ್ಕೂಟದ ಆಯುಕ್ತ ಥೈರ್ರೆ ಬ್ರೆಟೊನ್ಗೆ ಬರೆದ ಪತ್ರವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಸ್ರೇಲ್ನಲ್ಲಿ ಹಮಾಸ್ ದಾಳಿ ಬಳಿಕ ಯುರೋಪಿಯನ್ ಒಕ್ಕೂಟದಲ್ಲಿ ಕಾನೂನುಬಾಹಿರ ವಿಷಯ ಮತ್ತು ತಪ್ಪು ಮಾಹಿತಿಯನ್ನು ಪ್ರಸಾರ ಮಾಡಲು ಎಕ್ಸ್ ಫ್ಲಾಟ್ಫಾರ್ಮ್ ಅನ್ನು ಬಳಕೆ ಮಾಡಲಾಗುತ್ತಿದೆ ಎಂದು ಯುರೋಪಿಯನ್ ಒಕ್ಕೂಟಗಳು ಎಕ್ಸ್ ಮಾಲೀಕ ಮಸ್ಕ್ ಅವರಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ಮುಂದಿನ 24 ಗಂಟೆಗಳಲ್ಲಿ ಪ್ರಾಮಾಣಿಕ ನಿಖರ ಮತ್ತು ಸಂಪೂರ್ಣ ಪ್ರತಿಕ್ರಿಯೆಯನ್ನು ಕಳುಹಿಸುವಂತೆ ಯುರೋಪಿಯನ್ ಒಕ್ಕೂಟದ ಸೂಚನೆ ನೀಡಿತ್ತು.
ಈ ಕುರಿತು ಪೋಸ್ಟ್ ಮಾಡಿರುವ ಎಕ್ಸ್ ಸಿಇಒ ಯೊಕರಿನ್, ಇಲ್ಲಿಯವರೆಗೆ ನಾವು ಯುರೋಪಿಯನ್ ಒಕ್ಕೂಟದಿಂದ 80 ಮನವಿಗಳನ್ನು ಸ್ವೀಕರಿಸಿದ್ದೇವೆ. ನಮ್ಮ ಕಾನೂನು ಜಾರಿ ಅಧಿಕಾರದಿಂದ ಪ್ರತಿಕ್ರಿಯಿಸುವುದನ್ನು ಮುಂದುವರೆಸುತ್ತೇವೆ. ಕಾನೂನು ಜಾರಿ ಪ್ರಾಧಿಕಾರದ ವಿನಂತಿಗಳಿಗೆ ಸಮಯೋಚಿತವಾಗಿ ಹಾಗೂ ಕಾನೂನು ಪ್ರಕಾರ ಅದಕ್ಕೆ ಪ್ರತಿಕ್ರಿಯಿಸುವುದನ್ನು ಮುಂದುವರಿಸುತ್ತೇವೆ. ಸಾರ್ವಜನಿಕರ ಮಾತುಕತೆಯನ್ನು ರಕ್ಷಿಸುವುದು ನಮ್ಮ ಜಾಗತಿಕ ಜವಾಬ್ದಾರಿ. ಪ್ರತಿಯೊಬ್ಬರೂ ಸಮಯೋಚಿತ ಮಾಹಿತಿ ಪಡೆಯುವ ಮತ್ತು ಎಲ್ಲಾ ಬಳಕೆದಾರರಿಗಾಗಿ ಫ್ಲಾಟ್ಫಾರ್ಮ್ ಅನ್ನು ಸುರಕ್ಷಿತವಾಗಿಸುವ ಭರವಸೆ ನೀಡುತ್ತೇವೆ ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಹಮಾಸ್ ದಾಳಿಯಲ್ಲಿ 22 ಅಮೆರಿಕನ್ನರು ಬಲಿ: 17 ಮಂದಿ ನಾಪತ್ತೆ