ಜಕಾರ್ತ (ಇಂಡೋನೇಷ್ಯಾ): 2022ರಲ್ಲಿ ಜಗತ್ತಿನೆಲ್ಲೆಡೆ ಮರಣದಂಡನೆ ಶಿಕ್ಷೆಯ ಪ್ರಮಾಣ ಶೇ 53 ರಷ್ಟು ಹೆಚ್ಚಾಗಿದೆ ಎಂದು ಮಾನವ ಹಕ್ಕುಗಳ ಕುರಿತ ಸರ್ಕಾರೇತರ ಸಂಸ್ಥೆ ಅಮ್ನೆಸ್ಟಿ ಇಂಟರ್ನ್ಯಾಶನಲ್ ತನ್ನ ವಾರ್ಷಿಕ ವರದಿಯಲ್ಲಿ ಮಂಗಳವಾರ ತಿಳಿಸಿದೆ. ಇರಾನ್ ಮತ್ತು ಸೌದಿ ಅರೇಬಿಯಾದಲ್ಲಿ ಇದರ ಪ್ರಮಾಣ ಹೆಚ್ಚಿದ್ದು, ಏಷ್ಯಾದಲ್ಲಿ ಅತಿ ಹೆಚ್ಚು ಮರಣದಂಡನೆ ಶಿಕ್ಷೆ ಪ್ರಮಾಣ ಹೊಂದಿರುವ ದೇಶಗಳಲ್ಲಿ ಇಂಡೋನೇಷ್ಯಾ ಕೂಡಾ ಒಂದು ಎಂದು ಉಲ್ಲೇಖಿಸಿದೆ.
2022 ರಲ್ಲಿ ಮಧ್ಯಪ್ರಾಚ್ಯ ವಲಯ ಮತ್ತು ಉತ್ತರ ಆಫ್ರಿಕಾದ ದೇಶಗಳ ಪೈಕಿ ಶೇ.70 ರಷ್ಟು ಮರಣದಂಡನೆಗಳನ್ನು ಇರಾನ್ ಒಂದೇ ದೇಶದಲ್ಲಿ ನಡೆಸಲಾಗಿದೆ. ಇಲ್ಲಿ 2021 ರಲ್ಲಿ 314 ರಷ್ಟಿದ್ದ ಮರಣದಂಡನೆ ಶಿಕ್ಷೆಯ ಸಂಖ್ಯೆ 2022ರಲ್ಲಿ 576ಕ್ಕೆ ತಲುಪಿದ್ದು, ಶೇ.83 ರಷ್ಟು ಏರಿಕೆಯಾಗಿದೆ. ಸೌದಿ ಅರೇಬಿಯಾದಲ್ಲಿ ಮರಣದಂಡನೆಯ ಸಂಖ್ಯೆ 2021 ರಲ್ಲಿ 65 ರಷ್ಟಿದ್ದು, 2022 ರಲ್ಲಿ 196ಕ್ಕೆ ತಲುಪಿ ಮೂರು ಪಟ್ಟು ಹೆಚ್ಚಾಗಿದೆ.
2021 ರ ಮರಣದಂಡಣೆ ಪ್ರಮಾಣಕ್ಕೆ ಹೋಲಿಸಿದರೆ ಕುವೈತ್, ಮ್ಯಾನ್ಮಾರ್, ಪ್ಯಾಲೇಸ್ಟಿನ್, ಸಿಂಗಾಪುರ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ 2022ರಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ. 2021ರಲ್ಲಿ 18 ದೇಶಗಳಲ್ಲಿ ಒಟ್ಟಾರೆ 579 ಖೈದಿಗಳನ್ನು ಗಲ್ಲಿಗೇರಿಸಲಾಗಿತ್ತು. ಈ ಮೇಲಿನ ರಾಷ್ಟಗಳಲ್ಲಿ 2022ರಲ್ಲಿ ಒಟ್ಟು 883 ಮಂದಿಗೆ ಗಲ್ಲು ವಿಧಿಸಲಾಗಿತ್ತು.
ಇಂಡೋನೇಷ್ಯಾದಲ್ಲಿ 112 ಮರಣದಂಡನೆಗಳ ಪೈಕಿ ಶೇ 94 ಪ್ರಕರಣಗಳು ಮಾದಕವಸ್ತು ಸಂಬಂಧಿತ ಅಪರಾಧಗಳನ್ನು ಆಧರಿಸಿದ್ದವು. ಇದೇ ವರ್ಷದಲ್ಲಿ ಬಾಂಗ್ಲಾದೇಶದಲ್ಲಿ 169 ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಇದು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ದಾಖಲಾದ ಅತ್ಯಧಿಕ ಪ್ರಮಾಣ. ನಂತರದ ಸ್ಥಾನದಲ್ಲಿ ಭಾರತ 165 ಮತ್ತು ಪಾಕಿಸ್ತಾನ 127 ಅಪರಾಧಿಗಳನ್ನು ಗಲ್ಲಿಗೇರಿಸಿದೆ ಎಂದು ಅಮ್ನೆಸ್ಟಿ ಹೇಳುತ್ತದೆ.
ಇಂಡೋನೇಷ್ಯಾವು ಕೊಲೆ, ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆಯಂತಹ ಅಪರಾಧಗಳಿಗೆ ಮರಣದಂಡನೆ ಶಿಕ್ಷೆ ನೀಡುತ್ತದೆ. ಇಲ್ಲಿ ಕೊನೆಯ ಬಾರಿಗೆ, ಜುಲೈ 2016 ರಲ್ಲಿ ಮೂವರು ನೈಜೀರಿಯನ್ನರು ಮತ್ತು ಒಬ್ಬ ಮಾದಕವಸ್ತು ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಲಾಗಿತ್ತು. ಇಂಡೋನೇಷ್ಯಾದಲ್ಲಿ ಪ್ರಸ್ತುತ 450 ಕ್ಕೂ ಹೆಚ್ಚು ಮರಣದಂಡನೆ ಶಿಕ್ಷೆ ವಿಧಿಸಿರುವ ಕೈದಿಗಳಿದ್ದಾರೆ. ಈ ಪೈಕಿ 88 ವಿದೇಶಿ ಪ್ರಜೆಗಳು ಮತ್ತು 18 ಸ್ವದೇಶದವರೇ ಆಗಿದ್ದಾರೆ.
ವರದಿಯ ಪ್ರಕಾರ ಚೀನಾ, ಇರಾನ್, ಸೌದಿ ಅರೇಬಿಯಾ ಮತ್ತು ಸಿಂಗಾಪುರ ಮಾದಕವಸ್ತು ಮಾರಾಟ ಪ್ರಕರಣಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ 2022ರಲ್ಲಿ ಒಟ್ಟು 325 ಅಪರಾಧಿಗಳಿಗೆ ಮರಣದಂಡನೆ ವಿಧಿಸಿವೆ. ಇದು 2021 ರಲ್ಲಿ ದಾಖಲಾದ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು. ಪಪುವಾ, ನ್ಯೂಗಿನಿ, ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಕಳೆದ ವರ್ಷ ಮರಣದಂಡನೆ ರದ್ದುಪಡಿಸಿದ ದೇಶಗಳ ಸಂಖ್ಯೆ 112 ಎಂದು ಅಮ್ನೆಸ್ಟಿ ಮಾಹಿತಿ ನೀಡಿದೆ.
ಇದನ್ನೂ ಓದಿ: ರುದ್ರಾವತಾರ ತಾಳಿದ ಮೋಚಾ ಚಂಡಮಾರುತ: ಸೈಕ್ಲೋನ್ಗೆ ಆರು ಜನ ಬಲಿ, ಮಿಜೋರಾಂನಲ್ಲಿ 236 ಮನೆಗಳಿಗೆ ಹಾನಿ