ರೋಮ್(ಇಟಲಿ): ಪಿಂಚಣಿ ಪಡೆಯಲು ಮಹಿಳೆಯೊಬ್ಬರು ಕಣ್ಣಿಲ್ಲದಂತೆ ನಟಿಸಿ ಸರ್ಕಾರಕ್ಕೆ ವಂಚನೆ ಮಾಡಿರುವ ಘಟನೆ ಇಟಲಿಯಲ್ಲಿ ಬೆಳಕಿಗೆ ಬಂದಿದೆ. 48 ವರ್ಷದ ಮಹಿಳೆ 15 ವರ್ಷಗಳ ಹಿಂದೆ ವೈದ್ಯರಿಂದ ತಾನು ಅಂಧಳು ಎಂದು ಪ್ರಮಾಣಪತ್ರ ಪಡೆದಿದ್ದಳು. ಬಳಿಕ ಸಾಮಾಜಿಕ ಭದ್ರತಾ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದರು. ಆಕೆ ನಿಜಕ್ಕೂ ಅಂಧಳಾಗಿದ್ದಾಳೆ ಎಂದು ನಂಬಿದ ಅಧಿಕಾರಿಗಳು ಪಿಂಚಣಿ ಮಂಜೂರು ಮಾಡಿದರು. ಈಗ ಆ ಮಹಿಳೆ ಕುರುಡುತನದ ನಾಟಕ ಮಾಡಿರುವುದು ಬಹಿರಂಗವಾಗಿದ್ದು, ಈ ಬಗ್ಗೆ ಅಲ್ಲಿನ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗ್ತಿದೆ.
ಆ ಮಹಿಳೆ 15 ವರ್ಷಗಳಿಂದ ಪಿಂಚಣಿ ರೂಪದಲ್ಲಿ ಸರ್ಕಾರದಿಂದ ಒಟ್ಟು 2,08,000 ಯೂರೋ (1.8 ಕೋಟಿ ರೂ.) ಮೊತ್ತವನ್ನು ಪಡೆದು ವಂಚಿಸಿದ್ದಾರೆ. ಒಂದು ದಿನ ಅಧಿಕಾರಿಗಳು ಆಕೆಯ ಸೆಲ್ ಫೋನ್ ಮೂಲಕ ಸ್ಕ್ರೋಲ್ ಮಾಡುವುದನ್ನು ಮತ್ತು ಫೈಲ್ಗಳಿಗೆ ಸಹಿ ಹಾಕುವುದನ್ನು ಗಮನಿಸಿದರು. ಇದರಿಂದಾಗಿ ಆಕೆಯ ಮೋಸದ ಮುಖವಾಡ ಕಳಚಿ ಬಿದ್ದಿತು. ಈಗ ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆಕೆಯನ್ನು ಅಂಧಳು ಎಂದು ಪ್ರಮಾಣೀಕರಿಸಿದ ವೈದ್ಯರನ್ನೂ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಟಾಲಿಯನ್ ಸರ್ಕಾರದಿಂದ ಅಂಗವೈಕಲ್ಯ ಪ್ರಯೋಜನಗಳನ್ನು ಪಡೆಯಲು 15 ವರ್ಷಗಳ ಕಾಲ ಕುರುಡಳಂತೆ ನಟಿಸಿದ ಮಹಿಳೆ ತನ್ನ ಫೋನ್ ಮೂಲಕ ಸ್ಕ್ರೋಲಿಂಗ್ ಮಾಡುತ್ತಿರುವುದನ್ನು ಗಮನಿಸಿದ ನಂತರ ಆಕೆಯ ನಿಜ ಮುಖವಾಡ ಕಳಚಿಬಿದ್ದಿದೆ. ಈ ಬಗ್ಗೆ ಇಟಲಿಯ ಪ್ರಮುಖ ಕಾನೂನು ಜಾರಿ ಸಂಸ್ಥೆಗಳಲ್ಲಿ ಒಂದಾದ ಕ್ಯಾರಾಬಿನಿಯೇರಿ ಪ್ರತಿಕ್ರಿಯಿಸಿ, ಮಹಿಳೆ ತನ್ನ ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್ ಅನ್ನು ಬಳಸುತ್ತಿರುವುದು ಮತ್ತು ಯಾವುದೇ ತೊಂದರೆಯಿಲ್ಲದೆ ದಾಖಲೆಗಳಿಗೆ ಸಹಿ ಹಾಕುವುದು ಕಂಡು ಬಂದಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
15 ವರ್ಷಗಳಿಂದ ಕಣ್ಣಿಲ್ಲದಂತೆ ನಾಟಕವಾಡಿದ್ದಾಳೆ. ತಾನು ಅಂಧತ್ವದಿಂದ ಬಳಲುತ್ತಿದ್ದೇನೆ ಎಂದು ಸುಳ್ಳು ಹೇಳಿ ಪಿಂಚಣಿಯನ್ನು ಪಡೆದಿದ್ದಾಳೆ. ತನಿಖೆ ವೇಳೆ ಮಹಿಳೆ ಅತ್ಯಂತ ಪ್ರವೀಣ ಮತ್ತು ಸಮರ್ಥಳಾಗಿರುವುದು ತಿಳಿದು ಬಂದಿದೆ. ವಿಭಿನ್ನ ಸಂದರ್ಭಗಳಲ್ಲಿ ಮಹಿಳೆಯ ಅಂಗವೈಕಲ್ಯವನ್ನು ಪ್ರಮಾಣೀಕರಿಸಿದ ಇಬ್ಬರು ವೈದ್ಯರನ್ನು ಸಹ ತನಿಖೆಗೆ ಒಳಪಡಿಸಲಾಗಿದೆ. ನಿರಂತರ ವಂಚನೆಗೆ ಮತ್ತು ಸರ್ಕಾರಿ ಅಧಿಕಾರಿಗಳು ಸುಳ್ಳು ಪ್ರಮಾಣಪತ್ರ ನೀಡಿರುವುದರ ಬಗ್ಗೆ ಉತ್ತರಿಸಬೇಕಾಗುತ್ತದೆ ಎಂದರು.
ಓದಿ: ಸಮುದ್ರದಲ್ಲಿ ಹೋರಾಟಕ್ಕೆ ಅಗ್ನಿವೀರ್ ಮಹಿಳೆಯರು ಸಜ್ಜು
ಡ್ರೈವಿಂಗ್ ಲೈಸೆನ್ಸ್ಗಾಗಿ 960 ಬಾರಿ ಪ್ರಯತ್ನಿಸಿ ಯಶಸ್ವಿಯಾದ ಮಹಿಳೆ: ಇದು ಅಚ್ಚರಿಯಾದರೂ ಸತ್ಯ ಘಟನೆ. ದಕ್ಷಿಣ ಕೊರಿಯಾದ 69ರ ಪ್ರಾಯದ ಚಾ ಸಾ-ಸೂನ್ ಎಂಬ ವೃದ್ಧೆ ಏಪ್ರಿಲ್ 2005ರಲ್ಲಿ ಮೊದಲ ಬಾರಿಗೆ ಡ್ರೈವಿಂಗ್ ಲೈಸೆನ್ಸ್ನ ಲಿಖಿತ ಪರೀಕ್ಷೆಯನ್ನು ಬರೆದಿದ್ದರು. ಆದರೇ ಸೂನ್ ಅವರು ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಹೇಗಾದರು ಮಾಡಿ ಡ್ರೈವಿಂಗ್ ಲೈಸೆನ್ಸ್ ಪಡೆದೇ ತೀರಬೇಕು ಎಂದು ನಿರ್ಧರಿಸಿದ ಅವರು ವಾರಕ್ಕೆ ಐದು ದಿನ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಪರೀಕ್ಷೆ ಬರೆಯಲು ಆರಂಭಿಸಿದರು.
ಮೂರು ವರ್ಷಗಳ ಕಾಲ ವಾರಕ್ಕೆ ಐದು ದಿನ ನಿಯಮಿತವಾಗಿ ಪರೀಕ್ಷೆಗೆ ಹಾಜರಾಗಿದ್ದರು. ಮೂರು ವರ್ಷಗಳಲ್ಲಿ 780 ಪ್ರಯತ್ನಗಳನ್ನು ಮಾಡಿದ ಅವರಿಗೆ ಎಲ್ಲದರಲ್ಲೂ ಫಲಿತಾಂಶ ಫೇಲ್ ಎಂದೇ ಇರುತಿತ್ತು. ಆದರೆ ಸೂನ್ ಮಾತ್ರ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ ಬರೆಯುವ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಮೂರು ವರ್ಷಗಳ ನಂತರ ವಾರಕ್ಕೆ ಎರಡು ಬಾರಿ ಪರೀಕ್ಷೆಗೆ ಹೋಗತೊಡಗಿದರು. ದೀರ್ಘ ಕಾಲದಿಂದ ಪ್ರಯತ್ನಿಸುತ್ತಿದ್ದ ಅವರು ಅಂತಿಮವಾಗಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಾಯೋಗಿಕ ಪರೀಕ್ಷೆಗೆ ಆಯ್ಕೆಯಾದರು. ಪ್ರಾಯೋಗಿಕ ಪರೀಕ್ಷೆಯಲ್ಲೂ ಹತ್ತು ಬಾರಿ ಪ್ರಯತ್ನಿಸಿ ಯಶಸ್ವಿಯಾದರು. ಒಟ್ಟು 960 ಪ್ರಯತ್ನಗಳ ನಂತರ ಚಾ ಸಾ-ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾರೆ.