ನ್ಯೂಯಾರ್ಕ್( ಅಮೆರಿಕ) : ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಉಂಟಾಗಿರುವ ಅಪಾರ ಜೀವ ಹಾನಿ ಸಂಬಂಧ ಭಾರತ ವಿಶ್ವಸಂಸ್ಥೆಯಲ್ಲಿ ಕಳವಳ ವ್ಯಕ್ತಪಡಿಸಿದೆ. ಈ ಸಂಬಂಧ ಉಭಯ ರಾಷ್ಟ್ರಗಳ ಈ ಕೂಡಲೇ ಹಿಂಸಾಚಾರವನ್ನು ಕೈ ಬಿಡುವಂತೆ ಭಾರತ ಒತ್ತಾಯಿಸಿದೆ.
ಇಸ್ರೇಲ್ ಮತ್ತು ಹಮಾಸ್ ಸಂಘರ್ಷ ಸಂಬಂಧ ಶುಕ್ರವಾರ ಇಲ್ಲಿ ನಡೆದ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ತುರ್ತು ವಿಶೇಷ ಸಭೆಯಲ್ಲಿ ಭಾರತ ಕಳವಳ ವ್ಯಕ್ತಪಡಿಸಿತು. ಸಭೆಯಲ್ಲಿ ಭಾರತದ ಖಾಯಂ ಉಪ ಪ್ರತಿನಿಧಿ ಯೋಜನಾ ಪಟೇಲ್ ಮಾತನಾಡಿ, ಭಾರತವು ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ನಾಗರಿಕರ ಸಾವಿನ ಸಂಬಂಧ ಕಳವಳ ವ್ಯಕ್ತಪಡಿಸುತ್ತದೆ. ಯುದ್ಧದಿಂದಾಗಿ ಈ ಪ್ರದೇಶದಲ್ಲಿ ಹಗೆತನ ಉಂಟಾಗುತ್ತಿದ್ದು, ಇದು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಈ ಸಂಬಂಧ ಎಲ್ಲಾ ದೇಶಗಳು ತನ್ನ ಜವಾಬ್ದಾರಿಯನ್ನು ಪ್ರದರ್ಶಿಸುವುದು ಅಗತ್ಯ ಎಂದು ಹೇಳಿದರು.
ದ್ವಿರಾಜ್ಯ ಪರಿಹಾರಕ್ಕೆ ಭಾರತ ಬೆಂಬಲ : ಭಾರತವು ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ಬಿಕ್ಕಟ್ಟಿಗೆ ದ್ವಿರಾಜ್ಯ ಪರಿಹಾರವನ್ನು ಬೆಂಬಲಿಸುತ್ತದೆ. ಇದು ಸಾರ್ವಭೌಮ, ಸ್ವತಂತ್ರ ಪ್ಯಾಲೆಸ್ಟೇನ್ ದೇಶದ ನಿರ್ಮಾಣಕ್ಕೆ ಕಾರಣವಾಗುತ್ತದೆ. ಇದರಿಂದ ಪ್ಯಾಲೆಸ್ಟೇನ್ ಇಸ್ರೇಲ್ನೊಂದಿಗೆ ಶಾಂತಿಯುತ ಗಡಿಯನ್ನು ಹೊಂದಲು ಸಾಧ್ಯವಾಗುತ್ತದೆ. ಈ ಸಂಬಂಧ ಇಸ್ರೇಲ್ ಹಮಾಸ್ ಸಂಘರ್ಷವನ್ನು ಶಾಂತಿ ಮಾತುಕತೆಗಳ ಮೂಲಕ ಬಗೆಹರಿಸಲು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಭೆಯು ಭಯೋತ್ಪಾದನೆ ಮತ್ತು ಹಿಂಸಾಚಾರದ ವಿರುದ್ಧ ಒಂದು ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ. ಈ ಮೂಲಕ ಬಿಕ್ಕಟ್ಟನ್ನು ಪರಿಹರಿಸಲು ರಾಜತಾಂತ್ರಿಕ ಮಾತುಕತೆಯನ್ನು ನಡೆಸುತ್ತದೆ ಎಂದು ಭಾವಿಸುತ್ತೇನೆ. ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿರುವುದು ಖಂಡನೀಯ. ಇದೊಂದು ಆಘಾತಕಾರಿ ಘಟನೆ. ಈ ಸಂಬಂಧ ಹಮಾಸ್ ಉಗ್ರರು ಈಗಾಗಲೇ ಒತ್ತೆಯಾಳುಗಳಾಗಿರಿಸಿರುವ ನಾಗರಿಕರನ್ನು ಬಿಡುಗಡೆ ಮಾಡಬೇಕೆಂದು ಸಭೆಯಲ್ಲಿ ಪಟೇಲ್ ಒತ್ತಾಯಿಸಿದರು.
ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ : ಭಯೋತ್ಪಾದನೆಯು ಮಾರಣಾಂತಿಕವಾಗಿದ್ದು, ಯಾವುದೇ ದೇಶ, ರಾಷ್ಟ್ರೀಯತೆ ಮತ್ತು ಜನಾಂಗಕ್ಕೆ ಸೀಮಿತವಾಗಿಲ್ಲ. ಭಯೋತ್ಪಾದನಾ ಕೃತ್ಯಗಳಿಗೆ ಬೆಂಬಲ ನೀಡುವುದು ಸರಿಯಲ್ಲ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇದ್ದರೂ ನಾವೆಲ್ಲ ಒಟ್ಟಾಗಿ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಹೊಂದಬೇಕು ಎಂದರು.
ಗಾಜಾದಲ್ಲಿನ ಸಾವು ನೋವುಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಅವರು, ಗಾಜಾದಲ್ಲಿ ಮಹಿಳೆಯರು ಮಕ್ಕಳು ಈ ಯುದ್ಧದಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಈ ಸಂಬಂಧ ಎಲ್ಲಾ ದೇಶಗಳು, ಗಾಜಾದ ನಾಗರೀಕರಿಗೆ ಮಾನವೀಯ ನೆರವನ್ನು ನೀಡಬೇಕು. ಭಾರತವು ತನ್ನ ಮಾನವೀಯ ನೆರವನ್ನು ನೀಡಿದೆ ಎಂದು ಇದೇ ವೇಳೆ ಹೇಳಿದರು.
ಮಾನವೀಯ ಒಪ್ಪಂದಕ್ಕೆ ನಿರ್ಣಯ ಅಂಗೀಕಾರ : ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿ ಸಭೆಯಲ್ಲಿ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಸಂಘರ್ಷ ಸಂಬಂಧ " ಮಾನವೀಯ ಒಪ್ಪಂದಕ್ಕೆ ನಿರ್ಣಯವನ್ನು ಅಂಗೀಕರಿಸಿತು. ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವಸಂಸ್ಥೆ, ಇಸ್ರೇಲ್ - ಹಮಾಸ್ ಬಿಕ್ಕಟ್ಟು ಸಂಬಂಧ ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ಹೊಣೆಗಾರಿಕೆಗಳನ್ನು ಎತ್ತಿಹಿಡಿಯುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈ ನಿರ್ಣಯಕ್ಕೆ 120 ದೇಶಗಳು ಪರವಾಗಿ, 14 ದೇಶಗಳು ವಿರುದ್ಧವಾಗಿ, 45 ದೇಶಗಳು ತಟಸ್ಥವಾಗಿ ಮತದಾನ ಮಾಡಿದವು.
ಜೋರ್ಡಾನ್ ನೇತೃತ್ವದ ಕರಡು ನಿರ್ಣಯವನ್ನು ಜನರಲ್ ಅಸೆಂಬ್ಲಿಯಲ್ಲಿ ಅಂಗೀಕರಿಸಲಾಗಿದೆ. ನಿರ್ಣಯದ ಮೇಲಿನ ಮತದಾನದಿಂದ ದೂರ ಉಳಿದ 45 ರಾಷ್ಟ್ರಗಳಲ್ಲಿ ಐಸ್ಲ್ಯಾಂಡ್, ಭಾರತ, ಪನಾಮ, ಲಿಥುವೇನಿಯಾ ಮತ್ತು ಗ್ರೀಸ್ ಸೇರಿವೆ. ಈ ನಿರ್ಣಯವನ್ನು ರಷ್ಯಾ, ಯುಎಇ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ 40 ದೇಶಗಳು ಬೆಂಬಲಿಸಿವೆ.
ಇದನ್ನೂ ಓದಿ : ಗಾಜಾದಲ್ಲಿ ಇಸ್ರೇಲ್ ಸೇನೆಯಿಂದ ವೈಮಾನಿಕ ದಾಳಿ: ಪ್ರಮುಖ ಹಮಾಸ್ ಉಗ್ರರ ಹತ್ಯೆ, ಸಾವಿನ ಸಂಖ್ಯೆ 7 ಸಾವಿರಕ್ಕೇರಿಕೆ