ಲಂಡನ್(ಬ್ರಿಟನ್): ವೈದ್ಯಕೀಯ ವೃತ್ತಿಗೆ ಮತ್ತು ಮಾನವೀಯತೆಗೆ ಮಸಿ ಬಳಿಯಲು ಬ್ರಿಟನ್ನ ನರ್ಸ್ ಒಬ್ಬರು ಏಳು ಶಿಶುಗಳ ಜೀವವನ್ನೇ ತೆಗೆದಿರುವ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ ನರ್ಸ್ ಅನ್ನು ಪೊಲೀಸರಿಗೆ ಹಿಡಿದು ಕೊಟ್ಟಿರುವ ಭಾರತೀಯ ಮೂಲದ ವೈದ್ಯರು ಈ ಘಟನೆಯ ಪ್ರಮುಖ ಕೆಲ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ಇಂಗ್ಲೆಂಡ್‌ನ ಚೆಸ್ಟರ್‌ನಲ್ಲಿರುವ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯಲ್ಲಿ 2015-16ರಲ್ಲಿ ಈ ದುಷ್ಕೃತ್ಯ ನಡೆದಿತ್ತು. ನವಜಾತ ಶಿಶುಗಳ ವಾರ್ಡ್‌ನಲ್ಲಿ ಕೆಲಸ ಮಾಡುವ ಲೂಸಿ ಲೆಫ್ಟಿ (33) ಈ ಘಟನೆಯ ಅಪರಾಧಿ ಎಂದು ಸಾಬೀತಾಗಿದೆ. ಭಾರತೀಯ ಮೂಲದ ವೈದ್ಯ ರವಿ ಜಯರಾಂ ಸೇರಿದಂತೆ ಇತರ ವೈದ್ಯರು ನೀಡಿದ ದೂರಿನ ನಂತರ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಜಯರಾಮ್ ಇದೇ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೋರ್ಟ್ ತೀರ್ಪಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರವಿ ಜಯರಾಂ, 2015ರ ಜೂನ್‌ನಲ್ಲಿ ಮೂರು ಶಿಶುಗಳು ಪ್ರಾಣ ಕಳೆದುಕೊಂಡಿದ್ದವು. ಒಂದು ರಾತ್ರಿ ನಾನು ನವಜಾತ ಶಿಶುವಿನ ವಾರ್ಡ್‌ನ ಹಿಂದೆ ನಡೆದುಕೊಂಡು ಹೋಗುತ್ತಿರುವಾಗ ಲೂಸಿ ಇನ್‌ಕ್ಯುಬೇಟರ್‌ನ ಪಕ್ಕದಲ್ಲಿ ನಿಂತಿರುವುದನ್ನು ನೋಡಿದೆ. ಅಲ್ಲಿನ ಪರಿಸ್ಥಿತಿಗಳು ಸಾಮಾನ್ಯವಲ್ಲ ಎಂದು ನನಗೆ ಅನಿಸಿತು ಎಂದರು.
ಆಗ ನಮಗೆ ಲೂಸಿಯ ಮೇಲೆ ಮೊದಲ ಅನುಮಾನ ಬಂದಿತ್ತು. ಆಕೆಯ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳಿಗೆ ಹೇಳಿದೆವು. ಆದರೆ ಅವರು ನಮ್ಮನ್ನು ನಂಬಲಿಲ್ಲ. ಅಷ್ಟೇ ಅಲ್ಲ ಸಹೋದ್ಯೋಗಿ ಮೇಲೆ ಅನಗತ್ಯ ಅಥವಾ ಸುಳ್ಳು ಆರೋಪಗಳನ್ನು ಮಾಡಬೇಡಿ ಎಂದು ಹೇಳಿದರು. ಇದಲ್ಲದೇ ಲೂಸಿ ಬಳಿಕ ಕ್ಷಮೆಯಾಚಿಸುವಂತೆ ಹೇಳಿದರು. ಮೇಲಧಿಕಾರಿಗಳ ಒತ್ತಾಯಕ್ಕೆ ಮಣಿದು ನಾನು ಆಕೆಗೆ ಕ್ಷಮೆಯಾಚಿಸಿ ನೋಟ್ ಬರೆಯಬೇಕಾಯಿತು. ನಮ್ಮ ಕಾಳಜಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಇಷ್ಟೊತ್ತಿಗೆ ನಾಲ್ಕೈದು ಮಕ್ಕಳಾದರೂ ಶಾಲೆಗೆ ಹೋಗುತ್ತಿದ್ದರು ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ ಅಂತಾ ಹೇಳಿದರು.
ಏಪ್ರಿಲ್ 2017 ರವರೆಗೂ ಲೂಸಿ ಬಗ್ಗೆ ದೂರು ನೀಡಲು ರಾಷ್ಟ್ರೀಯ ಆರೋಗ್ಯ ಸೇವಾ ಟ್ರಸ್ಟ್ ಅವಕಾಶ ನೀಡಲಿಲ್ಲ. ನಂತರ ನಾವು ಪೊಲೀಸರ ಬಳಿಗೆ ಹೋಗಿ ಘಟನೆಯನ್ನು ವಿವರಿಸಿದೆವು. 10 ನಿಮಿಷದಲ್ಲಿ ಅವರಿಗೆ ಪರಿಸ್ಥಿತಿ ಅರ್ಥವಾಯಿತು. ತಕ್ಷಣ ತನಿಖೆ ಆರಂಭಿಸಿ ಲೂಸಿಯನ್ನು ಬಂಧಿಸಿದರು ಎಂದು ರವಿ ಜಯರಾಮ್ ಪ್ರಕರಣದ ಬಗ್ಗೆ ವಿವರಿಸಿದರು.
ನವಜಾತ ಶಿಶುಗಳ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಲೂಸಿ, ಚುಚ್ಚುಮದ್ದಿನಿಂದ ಶಿಶುಗಳ ರಕ್ತಕ್ಕೆ ಗಾಳಿಯನ್ನು ತುಂಬುತ್ತಿದ್ದರು. ನಾಸೊಗ್ಯಾಸ್ಟ್ರಿಕ್ ಟ್ಯೂಬ್‌ಗಳ ಮೂಲಕ ಶಿಶುಗಳ ಹೊಟ್ಟೆಗೆ ಹಾಲು ಮತ್ತು ನೀರನ್ನು ಒತ್ತಾಯ ಪೂರಕವಾಗಿ ಕಳುಹಿಸುಂವತಹ ಕೆಲಸ ಮಾಡುತ್ತಿದ್ದರು. ಪರಿಣಾಮ ಏಳು ಶಿಶುಗಳು ಶ್ವಾಸನಾಳದಲ್ಲಿ ತೊಂದರೆಯುಂಟಾಗಿ ಪ್ರಾಣ ಕಳೆದುಕೊಂಡಿದ್ದವು. ಲೂಸಿ ಇತರ ಆರು ಮಕ್ಕಳ ಮೇಲೂ ಇದೇ ರೀತಿಯ ದೌರ್ಜನ್ಯ ಎಸಗಿದ್ದರು. ಆದರೆ ಆ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿವೆ. ಲೂಸಿಯನ್ನು ಪೊಲೀಸರು ಜುಲೈ 2018 ರಲ್ಲಿ ಬಂಧಿಸಿದ್ದರು. ನವೆಂಬರ್ 2020 ರಂದು ಆರೋಪಗಳನ್ನು ಸಲ್ಲಿಕೆ ಮಾಡಲಾಗಿತ್ತು. ಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸಿ ತಪ್ಪಿತಸ್ಥಳು ಎಂದು ಹೇಳಿದೆ. ಸೋಮವಾರ ಆಕೆಗೆ ಶಿಕ್ಷೆ ಪ್ರಕಟವಾಗಲಿದೆ.
ಓದಿ: " ನಾನು ದೆವ್ವ": ಒಂದೇ ವರ್ಷದಲ್ಲಿ ಏಳು ನವಜಾತ ಶಿಶುಗಳನ್ನು ಕೊಂದ ಬ್ರಿಟಿಷ್ ನರ್ಸ್