ನ್ಯೂಯಾರ್ಕ್ : 2024ರ ಅಧ್ಯಕ್ಷೀಯ ಚುನಾವಣೆಯ ರಾಷ್ಟ್ರೀಯ ಮತದಾನದ ಸಮೀಕ್ಷೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜೋ ಬೈಡೆನ್ ಅವರಿಗಿಂತ ಮುಂದಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ವಾಲ್ ಸ್ಟ್ರೀಟ್ ಜರ್ನಲ್ ಸಮೀಕ್ಷೆಯ ಪ್ರಕಾರ ಬೈಡನ್ ಅವರ ಅಧ್ಯಕ್ಷೀಯ ಕಾರ್ಯವೈಖರಿಗೆ ಅತ್ಯಂತ ಕಡಿಮೆ ಜನ ಅನುಮೋದನೆ ನೀಡಿದ್ದಾರೆ. ಮತದಾನಕ್ಕೆ ಒಂದು ವರ್ಷಕ್ಕಿಂತಲೂ ಕಡಿಮೆ ಸಮಯವಿದ್ದು, ವಾಲ್ ಸ್ಟ್ರೀಟ್ ಜರ್ನಲ್ ಸಮೀಕ್ಷೆಯು ಈ ಹಿಂದೆ ನಡೆದ ಸಮೀಕ್ಷೆಗಳ ಫಲಿತಾಂಶಕ್ಕೆ ಅನುಗುಣವಾಗಿದೆ. ಇದು ಬೈಡನ್ ಅವರ ಡೆಮಾಕ್ರಟಿಕ್ ಪಕ್ಷದಲ್ಲಿ ಕಳವಳ ಮೂಡಿಸಿದೆ.
2024 ರಲ್ಲಿ ನಡೆಯಲಿರುವ ಶ್ವೇತಭವನ ಚುನಾವಣಾ ಪರೀಕ್ಷೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಪರವಾಗಿ ಮತದಾರರು ಒಲವು ತೋರಿದ್ದಾರೆ ಎಂದು ಈ ಸಮೀಕ್ಷೆಯು ಮೊದಲ ಬಾರಿಗೆ ತೋರಿಸಿದೆ. ಟ್ರಂಪ್ ಅವರು ಬೈಡನ್ ಅವರಿಗಿಂತ ನಾಲ್ಕು ಅಂಕ ಮುಂದಿದ್ದಾರೆ. ಟ್ರಂಪ್ ಶೇಕಡಾ 47 ಮತ್ತು ಬೈಡನ್ ಶೇಕಡಾ 43 ರಷ್ಟು ಮತದಾರರ ಒಲವು ಹೊಂದಿದ್ದಾರೆ ಎಂದು ಡಬ್ಲ್ಯುಎಸ್ಜೆ ಹೇಳಿದೆ.
ಐದು ಸಂಭಾವ್ಯ ಮೂರನೇ ವ್ಯಕ್ತಿಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳ ಅಂಕಗಳನ್ನು ಒಟ್ಟಿಗೆ ಸೇರಿಸಿದರೆ ಅದು ಒಟ್ಟು ಶೇಕಡಾ 17 ರಷ್ಟಾಗುತ್ತದೆ. ಈ ಮಾನದಂಡದ ಮೂಲಕ ನೋಡಿದರೆ ಟ್ರಂಪ್ ಅವರ ಮುನ್ನಡೆಯನ್ನು 37-31ಕ್ಕೆ ತರುತ್ತದೆ ಮತ್ತು ಟ್ರಂಪ್ ಅವರ ಬೆಂಬಲ ಆರು ಅಂಕಗಳಷ್ಟು ಹೆಚ್ಚಾಗುತ್ತದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಬೈಡನ್ ಎರಡನೇ ಅವಧಿಗೆ ಸ್ಪರ್ಧಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರೂ, ಅವರದೇ ಡೆಮಾಕ್ರಟಿಕ್ ಪಕ್ಷದ ಅನೇಕ ಮುಖಂಡರು ಅವರು ಮತ್ತೆ ಅಧ್ಯಕ್ಷರಾಗುವುದನ್ನು ಒಪ್ಪುತ್ತಿಲ್ಲ. ಸದ್ಯ ಚುನಾವಣಾ ದಿನದಂದು ಬೈಡನ್ ಅವರು 81 ವಯಸ್ಸಿನವರಾಗಲಿದ್ದಾರೆ ಮತ್ತು ಮುಂದಿನ ವರ್ಷ ಗೆದ್ದರೆ ಶ್ವೇತಭವನದಲ್ಲಿ ಎಂಟು ವರ್ಷ ಅಧಿಕಾರ ನಡೆಸಿದ ನಂತರ ಅವರು ವಯಸ್ಸು 86 ದಾಟಲಿದೆ. ಇದರಿಂದ ಮತದಾರರು ಪಕ್ಷದಿಂದ ದೂರ ಹೋಗಬಹುದು ಎಂಬ ಆತಂಕ ಈ ನಾಯಕರದ್ದಾಗಿದೆ.
ಅಧ್ಯಕ್ಷ ಬೈಡನ್ ರ ಪುತ್ರ ಹಂಟರ್ ಬೈಡನ್ ವಿರುದ್ಧ ಕ್ಯಾಲಿಫೋರ್ನಿಯಾದಲ್ಲಿ ಒಂಬತ್ತು ಕ್ರಿಮಿನಲ್ ತೆರಿಗೆ ಆರೋಪಗಳ ಮೇಲೆ ಗುರುವಾರ ಆರೋಪ ಹೊರಿಸಲಾಗಿದ್ದು, ಇದು ಬೈಡೆನ್ ಅವರ ಮತ್ತೊಂದು ಅವಧಿಯ ಹಾದಿಯಲ್ಲಿ ಸಾಕಷ್ಟು ಅಡೆತಡೆಗಳನ್ನು ಉಂಟು ಮಾಡಲಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಇದನ್ನೂ ಓದಿ : 'ವ್ಯಾಸಂಗದ ವೀಸಾ'ಗಾಗಿ ತೋರಿಸಬೇಕಾದ ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್ ದ್ವಿಗುಣಗೊಳಿಸಿದ ಕೆನಡಾ