ಟೋಕಿಯೊ(ಜಪಾನ್): ಭಾರತದಲ್ಲಿ ಕೋವಿಡ್ ಸೋಂಕು ನಿರ್ವಹಣೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೊಗಳಿದ್ದಾರೆ. ಪ್ರಜಾಸತ್ತಾತ್ಮಕ ವಿಧಾನದಲ್ಲಿ ಕೋವಿಡ್ ಮಹಾಮಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಬೈಡನ್ ಹೇಳಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ.
ಕೋವಿಡ್ ಹಾವಳಿಯನ್ನು ಚೀನಾ ಮತ್ತು ರಷ್ಯಾದಂತಹ ನಿರಂಕುಶಾಧಿಕಾರ ರಾಷ್ಟ್ರಗಳು ಮಾತ್ರ ಉತ್ತಮವಾಗಿ ನಿಭಾಯಿಸಬಲ್ಲವು ಎಂಬುವುದನ್ನು ಪ್ರಧಾನಿ ಮೋದಿ ಸುಳ್ಳು ಮಾಡಿದ್ದಾರೆ. ಯಶಸ್ಸನ್ನು ಪ್ರಜಾಪ್ರಭುತ್ವ ರಾಷ್ಟ್ರಗಳು ಪರಿಣಾಮಕಾರಿಯಾಗಿ ಸಾಧಿಸಬಲ್ಲವು ಎಂಬುದನ್ನು ಮೋದಿ ಜಗತ್ತಿಗೆ ತೋರಿಸಿದ್ದಾರೆ ಎಂದು ಬೈಡನ್ ಗುಣಗಾನ ಮಾಡಿದ್ದಾರೆ.
ಸುದೀರ್ಘವಾದ ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಮೂಲಕ ಹೋಗದೆಯೂ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಮತ್ತು ಕಾರ್ಯಗತಗೊಳಿಸಬಹುದು ಎಂದು ಮೋದಿ ನಾಯಕತ್ವದಿಂದ ಗೊತ್ತಾಗಿದೆ ಎಂದು ಜೋ ಬೈಡನ್ ಹೇಳಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೋಕಿಯೋದಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ತಮ್ಮ ಸಿದ್ಧ ಭಾಷಣಕ್ಕೂ ಮುನ್ನ ಕೋವಿಡ್ ವಿಚಾರವಾಗಿ ಅಮೆರಿಕ ಅಧ್ಯಕ್ಷರು ಮಾತನಾಡಿದರು. ಜನ ಸಂಖ್ಯೆಯಲ್ಲಿ ಚೀನಾ ಮತ್ತು ಭಾರತ ಒಂದೇ ಗಾತ್ರವನ್ನು ಹೊಂದಿದ್ದರೂ, ಕೋವಿಡ್ ನಿಭಾಯಿಸುವಲ್ಲಿ ಭಾರತದ ಯಶಸ್ಸನ್ನು ಚೀನಾದ ವೈಫಲ್ಯದೊಂದಿಗೆ ಹೋಲಿಸಿ ಈ ಹೇಳಿಕೆ ನೀಡಿದರು ಎಂದು ವರದಿಯಾಗಿದೆ.
ಇದನ್ನು ಓದಿ:ಬೈಡನ್ ಜೊತೆ ದ್ವಿಪಕ್ಷೀಯ ಮಾತುಕತೆ: ಜಾಗತಿಕ ಶಾಂತಿ, ಸ್ಥಿರತೆಗೆ ಭಾರತ-ಅಮೆರಿಕ ಸ್ನೇಹ ಉತ್ತಮ ಶಕ್ತಿ- ಮೋದಿ
ಅಸ್ಟ್ರೇಲಿಯಾ ಮತ್ತು ಜಪಾನ್ ಪ್ರಧಾನಿಯಿಂದಲೂ ಮೆಚ್ಚುಗೆ: ಆಸ್ಟ್ರೇಲಿಯಾದ ನೂತನ ಪ್ರಧಾನಿ ಆಂಥೋನಿ ಅಲ್ಬನೀಸ್ ಕೂಡ ಕೋವಿಡ್ ವಿಷಯವಾಗಿ ಭಾರತದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತವು ಇತರ ದೇಶಗಳಿಗೆ ಸರಬರಾಜು ಮಾಡಿದ ಲಸಿಕೆಗಳು ಸಾಕಷ್ಟು ಬದಲಾವಣೆ ತಂದಿವೆ. ಅಂತಹ ಯಶಸ್ಸು ಕೇವಲ ಸೈದ್ದಾಂತಿಕವಾಗಿ ವಿಚಾರಗಳನ್ನು ಗೆಲ್ಲುವುದಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ ಎಂದು ಆಂಥೋನಿ ಅಲ್ಬನೀಸ್ ಹೇಳಿದರು.
ಇತ್ತ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಕೂಡ 'ಕ್ವಾಡ್ ಲಸಿಕೆ ನೀತಿ'ಯಲ್ಲಿ ಭಾರತ ವಿತರಿಸಿದ ಲಸಿಕೆಗಳನ್ನು ಇತ್ತೀಚೆಗೆ ಥಾಯ್ಲೆಂಡ್ ಮತ್ತು ಕಾಂಬೋಡಿಯಾದಲ್ಲಿ ಕೃತಜ್ಞತೆಯಿಂದ ಸ್ವೀಕರಿಸಲಾಗಿದೆ ಎಂದು ಸ್ಮರಿಸಿದರು. ಈ ವೇಳೆ, ಕಾಂಬೋಡಿಯಾದಲ್ಲಿ ಪ್ರಧಾನಿ ಹನ್ ಸೇನ್ ಉಪಸ್ಥಿತರಿದ್ದರು ಎಂದು ಹಿರಿಯ ಅಧಿಕಾರಿ ವಿವರಿಸಿದ್ಧಾರೆ.