ವಾಷಿಂಗ್ಟನ್, ಅಮೆರಿಕ : ಭಾರತ ಮತ್ತು ಅಮೆರಿಕ ಎರಡೂ ದೇಶಗಳು ಹವಾಮಾನ ಬಿಕ್ಕಟ್ಟು ಮತ್ತು ಕೋವಿಡ್ ಸಾಂಕ್ರಾಮಿಕ ಸೇರಿದಂತೆ ದೊಡ್ಡ ದೊಡ್ಡ ಸಮಸ್ಯೆಗಳನ್ನು ಎದುರಿಸಲು ಪರಸ್ಪರ ಸಹಕಾರ, ಕಠಿಣ ಪರಿಶ್ರಮ ಮತ್ತು ನಾಯಕತ್ವದ ಅಗತ್ಯವಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ. ಮಂಗಳವಾರ ಹೊವಾರ್ಡ್ ಯೂನಿವರ್ಸಿಟಿ ಫಾರ್ ಇಂಡಿಯಾ-ಯುಎಸ್ ಶಿಕ್ಷಣ ಸಹಯೋಗದಲ್ಲಿ ಮಾತನಾಡಿದ ಬ್ಲಿಂಕೆನ್, ಭಾರತ ಮತ್ತು ಯುಎಸ್ ನಡುವೆ ಬಾಂಧವ್ಯವನ್ನು ನಿರ್ಮಿಸುವಲ್ಲಿ ಹೊವಾರ್ಡ್ ವಿಶ್ವವಿದ್ಯಾಲಯವು ಪ್ರಮುಖ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ನಡುವಿನ ಶೈಕ್ಷಣಿಕ ಸಂಬಂಧಗಳನ್ನು ಉಲ್ಲೇಖಿಸಿದ ಆಂಟೋನಿ ಬ್ಲಿಂಕೆನ್, 21ನೇ ಶತಮಾನದ ಸಮಸ್ಯೆಗಳನ್ನು ಪರಿಹರಿಸಲು ಭಾರತ ಮತ್ತು ಅಮೆರಿಕದ ನಡುವೆ ಸಂಪೂರ್ಣ ಪಾಲುದಾರಿಕೆಯ ಅಗತ್ಯವಿದೆ. ಎರಡೂ ದೇಶಗಳು ಎದುರಿಸುತ್ತಿರುವ ದೊಡ್ಡ ಸವಾಲುಗಳಿಗೆ ನಿರಂತರ ಸಹಯೋಗ, ಕಠಿಣ ಪರಿಶ್ರಮ ಮತ್ತು ನಾಯಕತ್ವದ ಅಗತ್ಯವಿದೆ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಸಂವಹನ ನಡೆಸುವಾಗ ಬ್ಲಿಂಕನ್ ಅಭಿಪ್ರಾಯಪಟ್ಟಿದ್ದಾರೆ.
ಹೊವಾರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಅಧ್ಯಾಪಕರೊಂದಿಗಿನ ಸಂವಾದದಲ್ಲಿ ಬ್ಲಿಂಕೆನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಭಾಗವಹಿಸಿದ್ದರು. ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ 2,00,000 ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಹಾಗೆಯೇ, ಫುಲ್‌ಬ್ರೈಟ್ ಅಥವಾ ಗಿಲ್ಮನ್ ಫೆಲೋಶಿಪ್‌ಗಳಂತಹ ಕಾರ್ಯಕ್ರಮಗಳ ಮೂಲಕ ಅಮೆರಿಕದ ಸಾಕಷ್ಟು ಮಂದಿ ಭಾರತದಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದು ಬ್ಲಿಂಕೆನ್ ಹೇಳಿದ್ದಾರೆ.
ಭಾರತ-ಯುಎಸ್ ಬಾಂಧವ್ಯವನ್ನು ಒತ್ತಿ ಹೇಳಿದ ಅವರು, ಎರಡೂ ದೇಶಗಳ ಜನರಿಗೆ ಕಲಿಕೆಗೆ ಅನುಕೂಲವಾಗುವಂತೆ ಕಾರ್ಯಕಾರಿ ಗುಂಪನ್ನು ರಚಿಸಲಾಗಿದೆ. ಈ ಗುಂಪು ಭಾರತ ಮತ್ತು ಅಮೆರಿಕದಲ್ಲಿ ಶಿಕ್ಷಣ ಮತ್ತು ಕೌಶಲ್ಯ ತರಬೇತಿಯ ಆಧಾರದ ಮೇಲೆ ಜಂಟಿ ಸಂಶೋಧನಾ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುತ್ತದೆ. ಈ ಮೂಲಕ ಎರಡೂ ದೇಶಗಳ ಜನರು ಒಟ್ಟಾಗಿ ಕಲಿಯಬಹುದು. ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ಪ್ರಜಾಪ್ರಭುತ್ವಗಳಾಗಿ ಎರಡೂ ದೇಶಗಳ ಮೇಲೆ ಅತಿ ಹೆಚ್ಚಿನ ಜವಾಬ್ದಾರಿ ಇದೆ ಎಂದು ಬ್ಲಿಂಕೆನ್ ಹೇಳಿದ್ದಾರೆ.
ಇದನ್ನೂ ಓದಿ: 'ನ್ಯಾಟೋ ಒಕ್ಕೂಟ ಸೇರಲು ಮುಂದಾದರೆ ಜಾಗ್ರತೆ': ಸ್ವೀಡನ್, ಫಿನ್ಲ್ಯಾಂಡ್ಗೆ ರಷ್ಯಾ ಎಚ್ಚರಿಕೆ