ಕೀವ್(ಉಕ್ರೇನ್): ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ ತಿಂಗಳುಗಳೇ ಕಳೆದಿವೆ. ಈ ಯುದ್ಧದಲ್ಲಿ ಉಕ್ರೇನ್ ರಷ್ಯಾ ದಾಳಿಯನ್ನು ಸಮರ್ಥವಾಗಿ ಎದುರಿಸಿ ಭಾರಿ ಪ್ರತಿರೋಧವನ್ನೇನೋ ತೋರಿದೆ. ಆದರೆ, ಹಲವು ನಗರಗಳು ಸ್ಮಶಾನಗಳಾಗಿ ಪರಿವರ್ತನೆ ಆಗಿವೆ. ಮೂಲ ಸೌಕರ್ಯಗಳೆಲ್ಲ ಹಾಳಾಗಿವೆ. ಒಟ್ಟಾರೆ ಈ ಯುದ್ಧದಿಂದ ಉಕ್ರೇನ್ ಬರೋಬ್ಬರಿ 1 ಲಕ್ಷ ಕೋಟಿ ರೂ.( 1 ಟ್ರಿಲಿಯನ್ ಡಾಲರ್ ನಷ್ಟ ಅನುಭವಿಸಿದೆ) ಎಂದು ಅಂದಾಜಿಸಲಾಗಿದೆ.
ಉಕ್ರೇನಿಯನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ಸ್ವತಃ ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ ಎಂದು ಇಂಟರ್‌ಫ್ಯಾಕ್ಸ್-ಉಕ್ರೇನ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮುಂಬರುವ ವರ್ಷಗಳಲ್ಲಿ ಆಗುವ ಈ ನಷ್ಟವನ್ನು ಪರಿಗಣನೆಗೆ ತೆಗೆದುಕೊಂಡರೆ, ಈ ಮೊತ್ತವು ಟ್ರಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಎಂದು ಶ್ಮಿಹಾಲ್ ಹೇಳಿದ್ದಾರೆ.
ರಷ್ಯಾದ ಡೆಡ್ಲಿ ಅಟ್ಯಾಕ್ಗೆ ಉಕ್ರೇನ್ ಹಲವು ನಗರಗಳಲ್ಲಿ ಸಾರ್ವಜನಿಕ ಕಟ್ಟಡಗಳು, ಸೇತುವೆಗಳು, ರಸ್ತೆಗಳು, ನಾಗರಿಕ ಮತ್ತು ಮಿಲಿಟರಿ ಮೂಲಸೌಕರ್ಯಗಳಿಗೆ ಭಾರಿ ಎಂದರೆ ಭಾರಿ ಹಾನಿಯಾಗಿದೆ. ಪರೋಕ್ಷವಾಗಿ 1 ಲಕ್ಷ ಕೋಟಿ ನಷ್ಟವಾಗಿದ್ದರೆ, ನೇರ ಹಾನಿಯ ವೆಚ್ಚ ಸುಮಾರು 270 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ.
ಸಂಘರ್ಷದಿಂದಾಗಿ ಉಕ್ರೇನ್‌ನ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಈ ವರ್ಷ 35 ಪ್ರತಿಶತದಷ್ಟು ಕುಗ್ಗಲಿದೆ ಎಂದು ಉಕ್ರೇನ್ ಪ್ರಧಾನಿಗಳು ಅಂದಾಜಿಸಿದ್ದಾರೆ. 2020 ರಲ್ಲಿ 3.8-ಶೇಕಡಾ ಕುಸಿತದ ನಂತರ ಉಕ್ರೇನ್‌ನ ಜಿಡಿಪಿ 2021 ರಲ್ಲಿ 3.4 ರಷ್ಟು ಹೆಚ್ಚಾಗಿತ್ತು. ಆದರೆ ರಷ್ಯಾ ದಾಳಿಯಿಂದ ಉಕ್ರೇನ್ ಆರ್ಥಿಕತೆ ಭಾರಿ ಪ್ರಪಾತಕ್ಕೆ ಹೋಗಿದೆ. ಯುದ್ಧದ ಮೇಲಿನ ಒಂದು ಮಾತಿನಂತೆ ಸೋತವನು ಸತ್ತ, ಗೆದ್ದವನು ಸೋತ ಎಂಬಂತಹ ಪರಿಸ್ಥಿತಿ ಎರಡೂ ರಾಷ್ಟ್ರಗಳಿಗೆ ಬಂದೊದಗಿದೆ.
ಇದನ್ನು ಓದಿ:ಹಿಮ, ಮಂಜಿನಿಂದಾಗಿ ಅಮೆರಿಕದಲ್ಲಿ ಭೀಕರ ಸರಣಿ ಅಪಘಾತ ; ಮೂವರ ಸಾವು, 20 ಮಂದಿಗೆ ಗಾಯ