ಲಂಡನ್: ಲಿಜ್ ಟ್ರಸ್ ಅವರು ಸೋಮವಾರದಂದು ಆಡಳಿತ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಮತ್ತು ಬ್ರಿಟನ್‌ನ ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ. ದೇಶವು ಹಣದುಬ್ಬರದ ಬಿಕ್ಕಟ್ಟು, ಕೈಗಾರಿಕಾ ಅಶಾಂತಿ ಮತ್ತು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಅವರು ಅಧಿಕಾರವನ್ನು ವಹಿಸಿಕೊಳ್ಳುವ ಸಾಧ್ಯತೆಯಿದೆ.
ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಮತ್ತು ಲಿಜ್ ಟ್ರಸ್ ಬ್ರಿಟನ್ ಪ್ರಧಾನಿ ರೇಸ್ನ ಪ್ರತಿಸ್ಪರ್ಧಿಗಳಾಗಿದ್ದಾರೆ. ಅನೇಕ ವಾರಗಳಿಂದ ಇಬ್ಬರ ಮಧ್ಯೆ ತುರುಸಿನ ಚುನಾವಣಾ ಪ್ರಚಾರ ನಡೆದಿದೆ. ಕೆಲ ಬಾರಿ ಚುನಾವಣಾ ಪ್ರಚಾರವು ಕೀಳು ಮಟ್ಟಕ್ಕೂ ಹೋಗಿತ್ತು. ಜಾಗತಿಕ ಕಾಲಮಾನ 1130 ಜಿಎಂಟಿ ಸಮಯದಲ್ಲಿ ಬ್ರಿಟನ್‌ನ ಹೊಸ ಪ್ರಧಾನಿಯ ಹೆಸರು ಘೋಷಣೆಯಾಗಲಿದೆ. ಹಿಂದಿನ ಪ್ರಧಾನಿ ಬೋರಿಸ್ ಜಾನ್ಸನ್ ಹಗರಣಗಳ ಆರೋಪದಿಂದ ಅನಿವಾರ್ಯವಾಗಿ ಜುಲೈನಲ್ಲಿ ರಾಜೀನಾಮೆ ನೀಡಿದ್ದರು.
ಮಂಗಳವಾರ ವಿಜೇತ ಅಭ್ಯರ್ಥಿಯು ರಾಣಿ ಎಲಿಜಬೆತ್ ಅವರನ್ನು ಭೇಟಿ ಮಾಡಲು ಸ್ಕಾಟ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ. ಸರ್ಕಾರ ರಚನೆ ಮಾಡುವಂತೆ ಈ ಸಂದರ್ಭದಲ್ಲಿ ಹೊಸ ನಾಯಕನಿಗೆ ರಾಣಿ ಎಲಿಜಬೆತ್ ಸೂಚಿಸುತ್ತಾರೆ.
ಒಂದು ವೇಳೆ ಟ್ರಸ್ ಪ್ರಧಾನಿಯಾಗಿ ಆಯ್ಕೆಯಾದರೆ, 2015ರ ಚುನಾವಣೆಯ ನಂತರ ಪ್ರಧಾನಿ ಹುದ್ದೆಗೇರುವ ಕನ್ಸರ್ವೇಟಿವ್ ಪಕ್ಷದ ನಾಲ್ಕನೇ ವ್ಯಕ್ತಿ ಇವರಾಗಲಿದ್ದಾರೆ. 2015 ರಿಂದೀಚೆಗೆ ದೇಶದಲ್ಲಿ ಬಿಕ್ಕಟ್ಟಿನ ಸರಮಾಲೆ ನಡೆಯುತ್ತಿದೆ. ಸದ್ಯ ಹಣದುಬ್ಬರವು ಶೇ 10.1 ಮಟ್ಟದಲ್ಲಿದ್ದು ಅರ್ಥಿಕ ಹಿಂಜರಿತ ದೇಶದಲ್ಲಿ ಎದುರಾಗಿದೆ.
ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್ ರಾಜೀನಾಮೆ