ನ್ಯೂಯಾರ್ಕ್(ಅಮೆರಿಕ): ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನ ನಡೆಯುತ್ತಿದೆ. ವಿವಿಧ ದೇಶದ ಅಧ್ಯಕ್ಷರು, ಮುಖ್ಯಸ್ಥರು ಜಗತ್ತಿನ ಪ್ರಮುಖ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ. ಅಧಿವೇಶನದಲ್ಲಿ ಭಾಗಿಯಾಗಿ ಮಾತನಾಡಿರುವ ಟರ್ಕಿ ಅಧ್ಯಕ್ಷ ರಿಸೆಪ್ ಎರ್ಡೋಗನ್, ಕಾಶ್ಮೀರದ ವಿವಾದ ಕೆದಕಿದರು.
ಭಾರತ-ಪಾಕಿಸ್ತಾನದ ನಡುವೆ ಇನ್ನೂ ಶಾಂತಿ ಸ್ಥಾಪನೆಯಾಗಿಲ್ಲ ಎಂದು ಹೇಳಿರುವ ಟರ್ಕಿ ಅಧ್ಯಕ್ಷ, 75 ವರ್ಷಗಳ ಹಿಂದೆ ಉಭಯ ದೇಶಗಳು ಸಾರ್ವಭೌಮತ್ವ ಹಾಗೂ ಸ್ವಾತಂತ್ರ್ಯ ಸ್ಥಾಪಿಸಿವೆ. ಆದರೆ, ಕಾಶ್ಮೀರ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಶಾಂತಿ, ಒಗ್ಗಟ್ಟು ಕಂಡು ಬಂದಿಲ್ಲ. ಇದು ಅತ್ಯಂತ ದುರದೃಷ್ಟಕರ ಎಂದರು.
ಇದನ್ನೂ ಓದಿ: 'ಇದು ಯುದ್ಧದ ಸಮಯವಲ್ಲವೆಂದು ಮೋದಿ ಸರಿಯಾಗಿಯೇ ಹೇಳಿದ್ದಾರೆ': ಫ್ರಾನ್ಸ್ ಅಧ್ಯಕ್ಷ
ಕಾಶ್ಮೀರದಲ್ಲಿ ನ್ಯಾಯಸಮ್ಮತ ಹಾಗೂ ಶಾಶ್ವತ ಶಾಂತಿ ಸಮೃದ್ಧಿ ಉಂಟಾಗಲಿ ಎಂದು ನಾವು ಬಯಸುತ್ತೇವೆ ಎಂದು ಅವರು ಹೇಳಿದರು. ಶಾಂಘೈ ಸಹಕಾರ ಒಕ್ಕೂಟ ಶೃಂಗದಲ್ಲಿ ಭಾಗಿಯಾಗಿದ್ದ ರಿಸೆಪ್ ಎರ್ಡೋಗನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಇದರ ನಂತರದ ಬೆಳವಣಿಗೆ ಇದಾಗಿದೆ.
ಈ ಹಿಂದೆಯೂ ಕೂಡ ಯುಎನ್ಜಿಎ ಅಧಿವೇಶನದಲ್ಲಿ ಕಾಶ್ಮೀರದ ವಿಚಾರ ಪ್ರಸ್ತಾಪಿಸಿದ್ದ ಎರ್ಡೋಗನ್ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಜೊತೆಗೆ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಹಾಳು ಮಾಡಿಕೊಂಡಿದ್ದರು.