ನ್ಯೂಯಾರ್ಕ್: ಬಂಧನವಾಗಿ ಕೋರ್ಟ್ಗೆ ಹಾಜರಾಗುವ ಮೂಲಕ ಕ್ರಿಮಿನಲ್ ಕೇಸ್ ಎದುರಿಸಿದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿ ಡೊನಾಲ್ಡ್ ಟ್ರಂಪ್ ಪಾಲಾಯಿತು. ನಿನ್ನೆ ಟ್ರಂಪ್ ಕ್ರಿಮಿನಲ್ ಆರೋಪಿಯಾಗಿ ಕೋರ್ಟ್ಗೆ ಹಾಜರಾಗಿದ್ದಾರೆ. 2016 ರ ಅಧ್ಯಕ್ಷೀಯ ಚುನಾವಣೆಗೂ ಮೊದಲು ವಯಸ್ಕ ಚಿತ್ರಗಳ ತಾರೆಗೆ ಹಣ ನೀಡಿದ ಆರೋಪ ಟ್ರಂಪ್ ಅವರ ಮೇಲಿತ್ತು. ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿ ಈ ಬಗ್ಗೆ ದೋಷಾರೋಪಣೆ ಹೊರಿಸಿತ್ತು.
ನಂತರ ಡೊನಾಲ್ಡ್ ಟ್ರಂಪ್ರನ್ನು ಮಂಗಳವಾರ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದರು. ಮ್ಯಾನ್‌ಹ್ಯಾಟನ್ ನ್ಯಾಯಾಲಯಕ್ಕೆ ಹಾಜರಾದ ಮಾಜಿ ಅಧ್ಯಕ್ಷ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದರು. ಬಳಿಕ ಬಂಧನದಿಂದ ಬಿಡುಗಡೆ ಕೂಡ ಹೊಂದಿದರು.
ನ್ಯಾಯಾಲಯದಲ್ಲಿ ಏನೇನಾಯ್ತು?: ಡೊನಾಲ್ಡ್ ಟ್ರಂಪ್ರನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆ ತಂದ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಬಳಿಕ ಪ್ಯಾಸಿಕ್ಯೂಷನ್ ಟ್ರಂಪ್ ಮೇಲಿನ ದೋಷಾರೋಪಣೆಗಳನ್ನು ಓದಿದರು. ವ್ಯಾಪಾರ ದಾಖಲೆಗಳನ್ನು ಹೊಂದಿದ 34 ಆರೋಪಗಳನ್ನು ಟ್ರಂಪ್ ಮೇಲೆ ಹೊರಿಸಲಾಯಿತು. ಆದರೆ, ಇವೆಲ್ಲವನ್ನೂ ಮಾಜಿ ಅಧ್ಯಕ್ಷರು ನಿರಾಕರಿಸಿದರು. 2016 ರ ಅಧ್ಯಕ್ಷೀಯ ಚುನಾವಣೆಯನ್ನು ದುರ್ಬಲಗೊಳಿಸಲು ಟ್ರಂಪ್ ಸಂಚು ರೂಪಿಸಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ವಾದಿಸಿದರು.
ವಯಸ್ಕ ಚಿತ್ರಗಳ ತಾರೆ ಸೇರಿದಂತೆ ಇಬ್ಬರಿ ಮಹಿಳೆಯರಿಗೆ ಅಧ್ಯಕ್ಷರಾಗಿದ್ದ ಹಣ ಸಂದಾಯವನ್ನು ಮಾಡಲಾಗಿದೆ. ಅಲ್ಲದೇ, ತಮ್ಮ ಸಂಬಂಧವನ್ನು ಎಲ್ಲೂ ಬಾಯಿಬಿಡದಂತೆ ಒತ್ತಡ ಹೇರಿದ್ದಾರೆ. ಟ್ರಂಪ್ ವಿವಾಹವಿಲ್ಲದೇ ಮಗುವಿನ ತಂದೆಯಾಗಿದ್ದಾರೆ ಎಂಬ ಆರೋಪವನ್ನು ಮ್ಯಾನ್ಹಟನ್ ನ್ಯಾಯಾಲಯದಲ್ಲಿ ಮಾಡಲಾಯಿತು.
ಇದಕ್ಕೂ ಮೊದಲು ಟ್ರಂಪ್ ಅವರು ನ್ಯಾಯಾಲಯದ ಹೊರಗೆ ನಿಂತಿದ್ದ ತನ್ನ ಬೆಂಬಲಿಗರತ್ತ ಕೈಬೀಸುತ್ತಾ ತೆರಳಿದರು. ಕೋರ್ಟ್ ಒಳಗೆ ಹೋದ ಬಳಿಕ ಬಾಗಿಲು ಹಾಕಲಾಯಿತು. ಯಾವುದೇ ಮಾಧ್ಯಮದವರಿಗೆ ಪ್ರವೇಶ ಅವಕಾಶ ನೀಡಲಾಗಲಿಲ್ಲ. ಫೋಟೋಗ್ರಾಫರ್ಗಳಿಗೆ ಮಾತ್ರ ಅವಕಾಶ ನೀಡಲಾಯಿತು. ನ್ಯಾಯಾಲಯದಲ್ಲಿ ಟ್ರಂಪ್ ಮೇಜಿನ ಮೇಲೆ ಕುಳಿತುಕೊಂಡಿದ್ದಾಗ, ಅವರ ವಕೀಲರು ಬದಿಯಲ್ಲಿ ನಿಂತಿದ್ದರು.
ವಾದ ಪ್ರತಿವಾದ ವೇಳೆ ಟ್ರಂಪ್ ಪರ ವಕೀಲರು ತಮ್ಮ ಕಕ್ಷಿದಾರ ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿದರು. ಟ್ರಂಪ್ ಕೂಡ ತನ್ನ ಮೇಲಿನ ಆರೋಪಗಳನ್ನು ನಯವಾಗಿ ನಿರಾಕರಿಸಿದರು. ಇದಾದ ಕೇವಲ ಒಂದು ಗಂಟೆಯ ನಂತರ ನ್ಯಾಯಾಲಯದಿಂದ ಹೊರಬಂದಾಗ ಟ್ರಂಪ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಟ್ರಂಪ್ ಅವರ ವಕೀಲ ಟಾಡ್ ಬ್ಲಾಂಚೆ ಅವರು ಮಾತನಾಡಿ, ವಿಚಾರಣೆಯ ವೇಳೆ ಟ್ರಂಪ್ ಅಸಮಾಧಾನಗೊಂಡಿದ್ದಾರೆ. ನ್ಯಾಯಾಲಯದಲ್ಲಿಯೇ ದೊಡ್ಡ ಅನ್ಯಾಯ ನಡೆಯುತ್ತಿದೆ ಎಂದು ಬೇಸರಗೊಂಡಿದ್ದಾರೆ ಎಂದು ಹೇಳಿದರು.
ಸಂಭಾವ್ಯ ಪರಿಣಾಮಗಳು: ಮಂಗಳವಾರದ ವಿಚಾರಣೆಯಲ್ಲಿ ನ್ಯಾಯಾಧೀಶರು ಯಾವುದೇ ಆದೇಶವನ್ನು ನೀಡಲಿಲ್ಲ. ಸಾಮಾಜಿಕ ಅಶಾಂತಿಯನ್ನು ಉಂಟುಮಾಡುವ ಕಾಮೆಂಟ್ಗಳ್ನು ಮಾಡುವುದನ್ನು ನಿಲ್ಲಿಸಲು ಟ್ರಂಪ್ಗೆ ಎಚ್ಚರಿಕೆ ನೀಡಿದ್ದಾರೆ. 34 ಆರೋಪಗಳ ಪೈಕಿ ಯಾವುದಾದರೂ ಒಂದರಲ್ಲಿ ದೋಷಿ ಎಂದು ಸಾಬೀತಾದರೆ, ಟ್ರಂಪ್ಗೆ ಗರಿಷ್ಠ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ, ಅಥವಾ ಇದಕ್ಕಿಂತ ಕಡಿಮೆ ಶಿಕ್ಷೆ ಕೂಡ ನೀಡಬಹುದು.
ಖುದ್ದು ವಿಚಾರಣೆಗೆ ವಿನಾಯಿತಿ: ಇನ್ನು ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಅದಕ್ಕೆ ಟ್ರಂಪ್ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಹೀಗಾಗಿ ಖುದ್ದು ಕೋರ್ಟ್ ವಿಚಾರಣೆಗೆ ಬಾರಲು ಆಗದ ಕಾರಣ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಯಾವುದೇ ಆದೇಶ ಹೊರಬಿದ್ದಿಲ್ಲ. ಡಿಸೆಂಬರ್ನಲ್ಲಿ ಮತ್ತೆ ವಿಚಾರಣೆ ನಡೆಯಲಿದೆ ಎಂದು ಹೇಳಲಾಗಿದೆ. ಟ್ರಂಪ್ ಕೋರ್ಟ್ಗೆ ಬರಲು ಸಾಧ್ಯವಿಲ್ಲ. ಆ ವೇಳೆ ಚುನಾವಣಾ ಪ್ರಚಾರ ಕಾರ್ಯ ನಡೆಯುತ್ತಿರುತ್ತದೆ ಎಂದು ಕಾರಣ ನೀಡಿದ್ದಾರೆ.
ರಾಜಕೀಯ ಪರಿಣಾಮಗಳು: ಕಾನೂನು ಸವಾಲುಗಳ ಸುಳಿಯನ್ನು ಎದುರಿಸುತ್ತಿದ್ದರೂ, ಟ್ರಂಪ್ ಮತ್ತೊಮ್ಮೆ ಅಧ್ಯಕ್ಷರಾಗಿ ಸ್ಪರ್ಧಿಸುತ್ತಿದ್ದಾರೆ. ತಮ್ಮ ಮೇಲಿನ ಈ ಎಲ್ಲಾ ಆರೋಪಗಳು ರಾಜಕೀಯ ಪ್ರೇರಿತ ಎಂದು ಹೇಳಿಕೆ ನೀಡಿದ್ದಾರೆ. ಟ್ರಂಪ್ ಮೇಲೆ ಕೇಳಿಬಂದ ಆರೋಪಗಳು ಡೆಮಾಕ್ರಟಿಕ್ ಮತದಾರರ ವಿರೋಧವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಓದಿ: ಕ್ರಿಮಿನಲ್ ಕೇಸ್ನಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ, ಬಿಡುಗಡೆ