ಡೆಸ್ ಮೊಯಿನ್ಸ್(ಅಮೆರಿಕ): ಜನವರಿ 23 ರಂದು ಡೆಸ್ ಮೊಯಿನ್ಸ್‌ನ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಲಾಗಿದ್ದು, ಈ ಬಗ್ಗೆ ವಿಚಾರಣೆ ಆರಂಭವಾಗಿದೆ. ಪ್ರಕರಣದ ಪ್ರಮುಖ ಆರೋಪಿ ಎಂದು ಪರಿಗಣಿಸಲಾಗಿರುವ ಪ್ರೆಸ್ಟನ್ ವಾಲ್ಸ್ (19) ನ ವಿಚಾರಣೆ ಸೋಮವಾರದಿಂದಲೇ ಆರಂಭಿಸಲಾಗಿದೆ.
ಇನ್ನು 2ನೇ ಆರೋಪಿ ಬ್ರಾವನ್ ಟುಕ್ಸ್(19)ನ ವಿಚಾರಣೆಯನ್ನು ಅಕ್ಟೋಬರ್ 2 ರಿಂದ ನಡೆಸಲಾಗುತ್ತದೆ. ಜನವರಿ 23 ರಂದು ಶಾಲೆಯಲ್ಲಿ ಈ ಇಬ್ಬರು ಆರೋಪಿಗಳು ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ ವಿದ್ಯಾರ್ಥಿಗಳಾದ ಜಿಯೋನಿ ಡೇಮೆರಾನ್ (18) ಮತ್ತು ರಶಾದ್ ಕಾರ್ (16) ಸಾವನ್ನಪ್ಪಿದರು. ಹಾಗೆ ಶಾಲೆಯ ಉದ್ಯೋಗಿ ವಿಲ್ ಕೀಪ್ಸ್ ಗಂಭೀರವಾಗಿ ಗಾಯಗೊಂಡಿದ್ದು ಈಗ ಚೇತರಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ನೀಡಿರುವ ದಾಖಲೆಯ ಪ್ರಕಾರ, ಡೌನ್‌ಟೌನ್ ಡೆಸ್ ಮೊಯಿನ್ಸ್‌ನ ಸಣ್ಣ ಕಚೇರಿ ಉದ್ಯಾನವನದಲ್ಲಿರುವ ಶಾಲೆಯಲ್ಲಿ ಮಧ್ಯಾಹ್ನ ಹೊತ್ತಿಗೆ ಗುಂಡಿನ ದಾಳಿ ನಡೆದಿತ್ತು. ಆರೋಪಿ ಪ್ರೆಸ್ಟನ್ ವಾಲ್ಸ್ ಶಾಲೆಗೆ ಬಂದೂಕು ಹಿಡಿದುಕೊಂಡೇ ಆಗಮಿಸಿದ್ದ. ಇದನ್ನು ಗಮನಿಸಿದ ಶಾಲೆಯ ಉದ್ಯೋಗಿ ವಿಲ್ ಕೀಪ್ಸ್ ಪ್ರೆಸ್ಟನ್ ವಾಲ್ಸ್ನ್ನು ತಡೆಯಲು ಪ್ರಯತ್ನಿಸಿದಾಗ ವಾಲ್ಸ್ ಉದ್ಯೋಗಿ ಸೇರಿದಂತೆ ಮೃತ ವಿದ್ಯಾರ್ಥಿಗಳಾದ ಡೇಮೆರಾನ್, ಕಾರ್ ಎಂಬುವವರ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ.
ಬಳಿಕ ಶಾಲಾ ಕಟ್ಟಡದ ಹತ್ತಿರದಲ್ಲೇ ನಿಂತಿದ್ದ ಇನ್ನೊಬ್ಬ ಆರೋಪಿ, ಗುಂಡು ಹಾರಿಸಿದವನನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಪರಾರಿಯಾಗಿದ್ದರು. ಮತ್ತೊಂದು ಕಡೆ ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ಇಬ್ಬರು ಅಸುನೀಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇನ್ನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದ.
ಬಂಧಿತ ಆರೋಪಿಗಳ ಪ್ರತ್ಯೇಕ ವಿಚಾರಣೆ: ಘಟನೆ ಬಳಿಕ ಕೆಲವೇ ನಿಮಿಷಗಳಲ್ಲಿ ಪೊಲೀಸರು ಗುಂಡಿಕ್ಕಿದ ಆರೋಪಿ ವಾಲ್ಸ್ನನ್ನು ಬಂಧಿಸಿದ್ದರು. ಹಲವು ದಿನಗಳ ನಂತರ ಟುಕ್ಸ್ನ್ನು ಬಂಧಿಸಿದರು. ಇಬ್ಬರನ್ನೂ ಪೋಲ್ಕ್ ಕೌಂಟಿ ಜೈಲಿನಲ್ಲಿ ಇರಿಸಲಾಗಿತ್ತು. ಬಂಧಿಸಲಾಗಿದ್ದ ಇಬ್ಬರು ಆರೋಪಿಗಳ ವಿಚಾರಣೆಯನ್ನು ಒಟ್ಟಿಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈ ಬಗ್ಗೆ ನ್ಯಾಯಲಯವು ಇಬ್ಬರ ವಿಚಾರಣೆಯನ್ನು ಪ್ರತ್ಯೇಕವಾಗಿ ನಡೆಸುವುದಾಗಿ ಹೇಳಿತ್ತು. ಕೋರ್ಟ್ ಆದೇಶದಂತೆ ಒಬ್ಬನ ವಿಚಾರಣೆ ಸೋಮವಾರದಿಂದ ಆರಂಭವಾಗಿದ್ದರೆ, ಇನ್ನೊಬ್ಬ ಆರೋಪಿಯ ವಿಚಾರಣೆ ಅಕ್ಟೋಬರ್ನಲ್ಲಿ ನಡೆಯಲಿದೆ. ಈ ನಡುವೆ ಬಂಧಿತ ಪ್ರಮುಖ ಆರೋಪಿ ವಾಲ್ಸ್ ಗುಂಡಿನ ದಾಳಿಯಲ್ಲಿ ತನ್ನ ಸಹವರ್ತಿ ಟುಕ್ಸ್ ಭಾಗಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದಾನೆ.
ಈ ನಡುವೆ, ಘಟನೆಯ 1 ತಿಂಗಳ ನಂತರ ಶಾಲೆಯನ್ನು ಪುನರಾರಂಭಿಸಲಾಗಿದೆ. ಗ್ಯಾಂಗ್ ವಾರ್ ನಡೆಯದಂತೆ ಶಾಲಾ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ಈಗ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಾರ್ಡ್‌ಗಳನ್ನು ನೇಮಿಸಲಾಗಿದೆ. ಜೊತೆಗೆ ಮೆಟಲ್ ಡಿಟೆಕ್ಟರ್‌ಗಳು ಸೇರಿದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಮಕ್ಕಳಿಬ್ಬರು ಸೇರಿದಂತೆ ನಾಲ್ವರ ಮೃತದೇಹ ಪತ್ತೆ: ನ್ಯೂಯಾರ್ಕ್‌ನ ಅಪಾರ್ಟ್ಮೆಂಟ್ವೊಂದರಲ್ಲಿ 3 ವರ್ಷದ ಬಾಲಕಿ ಮತ್ತು 1 ವರ್ಷದ ಬಾಲಕ ಸೇರಿದಂತೆ ನಾಲ್ವರ ಮೃತದೇಹ ಪತ್ತೆಯಾಗಿವೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಮ್ಯಾನ್‌ಹ್ಯಾಟನ್‌ನ ಅಪ್ಪರ್ ವೆಸ್ಟ್ ಸೈಡ್‌ನಲ್ಲಿ ಕ್ಷೇಮ ತಪಾಸಣೆಗಾಗಿ ಬಂದಿದ್ದ ಅಧಿಕಾರಿಗಳು ಮಕ್ಕಳು ಮತ್ತು 41 ವರ್ಷದ ಪುರುಷ ಹಾಗು 40 ವರ್ಷದ ಮಹಿಳೆಯ ಶವವನ್ನು ಪತ್ತೆ ಹಚ್ಚಿದ್ದು, ವಶಕ್ಕೆ ಪಡೆದಿದ್ದಾರೆ. ಇಬ್ಬರು ವಯಸ್ಕರರ ಕುತ್ತಿಗೆಗೆ ಹಾಗೂ ಮಕ್ಕಳಿಬ್ಬರ ದೇಹಕ್ಕೂ ಗಾಯಗಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನಾಯಕ ಯೆವ್ಗನಿ ಪ್ರಿಗೊಜಿನ್ ಸಾವು ಖಚಿತ ಪಡಿಸಿದ ರಷ್ಯಾ ತನಿಖಾ ಸಮಿತಿ