ಬಾಲಿ, ಇಂಡೋನೇಷ್ಯಾ: ನೂರಾರು ಕನಸುಗಳನ್ನು ಹೊತ್ತು, ಸುಖವಾಗಿ ಜೀವನ ಸಾಗಿಸಬೇಕು ಎಂದು ಕೊಂಡಿದ್ದ ವೈದ್ಯ ದಂಪತಿ ಮದುವೆಯಾಗಿ ಒಂದು ವಾರವೂ ಕಳೆಯುವುದರ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಜೂನ್ 1 ರಂದು ಇಬ್ಬರೂ ಮದುವೆಯಾಗಿದ್ದು, ಹನಿಮೂನ್‌ಗಾಗಿ ಬಾಲಿಗೆ ತೆರಳಿದ್ದರು. ಮದುವೆಯ ಹೊಸದರಲ್ಲಿ ಫೋಟೋಶೂಟ್ ತುಂಬಾ ಸಾಮಾನ್ಯ. ಬಹುಶಃ ಇದನ್ನು ಯೋಚಿಸಿ, ವೈದ್ಯ ದಂಪತಿ ಸ್ಪೀಡ್ ಬೋಟ್ ರೈಡ್ ಸಮಯದಲ್ಲಿ ಛಾಯಾಚಿತ್ರಗಳನ್ನು ಕ್ಲಿಕ್ ಮಾಡಲು ಸಮುದ್ರಕ್ಕೆ ತೆರಳಿದ್ದರು. ಆದರೆ, ಇದು ಅವರ ಕೊನೆಯ ಸವಾರಿ ಎಂದು ಅವರಿಗೆ ತಿಳಿದಿರಲಿಲ್ಲ.
Tragedy Honeymoon: ಮಾಧ್ಯಮಗಳ ವರದಿಯ ಪ್ರಕಾರ, ಮೃತರು ವೈದ್ಯ ದಂಪತಿಯಾದ ಲೋಕೇಶ್ವರನ್ ಮತ್ತು ವಿಭೂಶಾನಿಯಾ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಜೂನ್ 1 ರಂದು ಪೂನಮಲ್ಲಿಯ ಮದುವೆ ಮಂಟಪದಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಫೋಟೋಶೂಟ್ ವೇಳೆ ನೀರಿನಲ್ಲಿ ಮುಳುಗಿ ದಂಪತಿ ಸಾವನ್ನಪ್ಪಿರುವ ಬಗ್ಗೆ ಇಬ್ಬರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಕುಟುಂಬಸ್ಥರಲ್ಲಿ ಇಬ್ಬರ ಸಾವಿನ ಮಾಹಿತಿ ಬಂದ ತಕ್ಷಣವೇ ಮದುವೆ ಮನೆಯಲ್ಲಿ ತುಂಬಿದ್ದ ಸಂತಸ ಕೆಲವೇ ಸೆಕೆಂಡುಗಳಲ್ಲಿ ಶೋಕವಾಗಿ ಮಾರ್ಪಟ್ಟಿತ್ತು. ಕೂಡಲೇ ಎರಡು ಕುಟುಂಬಗಳು ಬಾಲಿ ತಲುಪಿದವು. ಶುಕ್ರವಾರ ಲೋಕೇಶ್ವರನ್ ಮೃತದೇಹ ಹಾಗೂ ಶನಿವಾರ ಬೆಳಗ್ಗೆ ವಿಭೂಷಣಿಯ ಮೃತದೇಹ ಪತ್ತೆಯಾಗಿದೆ. ಇದೀಗ ಇಬ್ಬರ ಮೃತದೇಹಗಳನ್ನು ಭಾರತಕ್ಕೆ ತರಲು ಸಿದ್ಧತೆ ನಡೆಸಲಾಗಿದೆ.
ದಂಪತಿ ಸಮುದ್ರಪಾಲು: ಸ್ಪೀಡ್ ಬೋಟ್ ರೈಡ್ ವೇಳೆ ಬೋಟ್ ಸಮುದ್ರಕ್ಕೆ ಉರುಳಿ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆದರೆ, ಘಟನೆಯ ವಿಸ್ತೃತ ತನಿಖೆ ಇನ್ನಷ್ಟೇ ಬರಬೇಕಿದೆ. ಇದೀಗ ಇಬ್ಬರ ಮೃತದೇಹಗಳನ್ನು ಚೆನ್ನೈಗೆ ತರಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ಇಂಡೋನೇಷ್ಯಾದಿಂದ ಚೆನ್ನೈಗೆ ನೇರ ವಿಮಾನಗಳು ಲಭ್ಯವಿಲ್ಲದ ಕಾರಣ, ಇಬ್ಬರ ಮೃತದೇಹಗಳನ್ನು ಮೊದಲು ಮಲೇಷ್ಯಾಕ್ಕೆ ತೆಗೆದುಕೊಂಡು ಬರಬೇಕು. ನಂತರ ಅಲ್ಲಿಂದ ಭಾರತಕ್ಕೆ ತರಲಾಗುತ್ತದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸೆನ್ನೆರ್ಕುಪ್ಪಂನಲ್ಲಿ ಶೋಕದ ಅಲೆಯೇ ಎದ್ದಿತು. ವಿಭೂಷಣಿಯ ಕುಟುಂಬ ಸೆನ್ನೆರ್ಕುಪ್ಪಂನಲ್ಲಿ ನೆಲೆಸಿದೆ.
ಇನ್ನೊಂದೆಡೆ ಲೋಕೇಶ್ವರನ ಮನೆಯಲ್ಲೂ ಶೋಕ ಮಡುಗಟ್ಟಿದೆ. ಮದುವೆಯಾಗಿ ಒಂದು ವಾರ ಕಳೆಯುವ ಮುನ್ನ ಲೋಕೇಶ್ವರ ಅವರು ದಿಢೀರ್ ಇಹಲೋಕ ತ್ಯಜಿಸುತ್ತಾರೆ ಎಂದು ನಾವು ಊಹಿಸರಲಿಲ್ಲ ಎಂದು ಸ್ನೇಹಿತರು ಶೋಕ ವ್ಯಕ್ತಪಡಿಸಿದ್ದಾರೆ. ಮೃತ ವೈದ್ಯ ದಂಪತಿಯ ಮೃತದೇಹಗಳನ್ನು ಸ್ವಗ್ರಾಮಕ್ಕೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ.
ಜೂನ್ 1ಕ್ಕೆ ಮದುವೆ, ಜೂನ್ 9ಕ್ಕೆ ಸಾವು: ಸೇಲ್ವಂ ಕುಟುಂಬಸ್ಥರು ತಮಿಳುನಾಡಿನ ಪೂಂತಮಲ್ಲಿಗೆ ಪಕ್ಕದ ಸೆನ್ನೆರ್ಕುಪ್ಪಂದ ನಿವಾಸಿ. ಅವರ ಮಗಳು ವಿಭೂಷಣಿಯ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಜೂನ್ 1ರಂದು ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ಪೂಂತಮಲ್ಲಿಗೆಯ ಖಾಸಗಿ ಮದುವೆ ಮಂಟಪದಲ್ಲಿ ಚೆನ್ನೈನ ವೈದ್ಯೆಯಾಗಿ ಕೆಲಸ ಮಾಡುತ್ತಿರುವ ಲೋಕೇಶ್ವರನ್ ಜೊತೆ ವಿಭೂಷಣಿಯ ವಿವಾಹವಾಗಿತ್ತು.
ನವವಿವಾಹಿತರು ಹನಿಮೂನ್‌ಗಾಗಿ ಇಂಡೋನೇಷ್ಯಾಕ್ಕೆ ತೆರಳಿದ್ದರು. ಈ ವೇಳೆ ಜೂನ್ 9 ರಂದು ಅಲ್ಲಿನ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ್ದರು. ಸಮುದ್ರದಲ್ಲಿ ಸ್ಫೀಡ್ ಬೋಟ್ ರೈಡಿಂಗ್ ಜೊತೆ ಫೋಟೋ ಶೂಟ್ ಕೂಡ ನಡೆಸಿದ್ದರು ಎನ್ನಲಾಗಿದೆ. ಅನಿರೀಕ್ಷಿತವಾಗಿ ಇಬ್ಬರೂ ಸಮತೋಲನ ಕಳೆದುಕೊಂಡು ಏಕಾಏಕಿ ಸಮುದ್ರಕ್ಕೆ ಬಿದ್ದಿದ್ದರಿಂದ ದಂಪತಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.