ಸಿಯೋಲ್ : ದಕ್ಷಿಣ ಕೊರಿಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ 21 ಮಂದಿ ಅಸುನೀಗಿದ್ದಾರೆ. ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ವರುಣನ ಆರ್ಭಟದಿಂದ ಉಂಟಾದ ಭೂಕುಸಿತ ಮತ್ತು ಪ್ರವಾಹಕ್ಕೆ ಸಿಲುಕಿ 10 ಮಂದಿ ನಾಪತ್ತೆಯಾಗಿದ್ದು, 9 ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಕನಿಷ್ಠ ಏಳು ಜನ ಮಳೆಗೆ ಬಲಿಯಾಗಿದ್ದಾರೆ. ಉತ್ತರ ಜಿಯೊಂಗ್‌ಸಾಂಗ್‌ನ ಆಗ್ನೇಯ ಪ್ರಾಂತ್ಯದಲ್ಲಿ ಹೆಚ್ಚಿನ ಸಾವು-ನೋವುಗಳು ಸಂಭವಿಸಿರುವ ಕುರಿತು ವರದಿಯಾಗಿವೆ. ಅಲ್ಲಿ ಭೂ ಮತ್ತು ಮನೆ ಕುಸಿತದಿಂದಾಗಿ 16 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಎಂದು ಸರ್ಕಾರ ಶನಿವಾರ ಮಾಹಿತಿ ನೀಡಿದೆ.
ಗೋಸನ್ ಅಣೆಕಟ್ಟು ಅಪಾಯದ ಮಟ್ಟ ಮೀರಿದ್ದು, ಅಪಾರ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. ಅಣೆಕಟ್ಟೆ ಪಾತ್ರದ ಸುಮಾರು 6,400 ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಡ್ಯಾಂ ಸಮೀಪವಿರುವ ತಗ್ಗು ಪ್ರದೇಶದ ಹಲವು ಗ್ರಾಮಗಳು ಮುಳುಗಡೆಯಾಗಿವೆ. ರಸ್ತೆಗಳು ಮತ್ತು ಸೇತುವೆಗಳು ಸಂಪರ್ಕ ಕಡಿತಗೊಂಡಿವೆ. ಹೀಗಾಗಿ, ಇನ್ನೂ ಕೆಲವು ನಿವಾಸಿಗಳು ತಮ್ಮ ಮನೆಗಳಲ್ಲಿಯೇ ಸಿಲುಕಿಕೊಂಡಿದ್ದಾರೆ.
ಇದನ್ನೂ ಓದಿ : ಭಾರಿ ಮಳೆಗೆ ಮುಂಬೈ ತಲ್ಲಣ.. ತಗ್ಗು ಪ್ರದೇಶಗಳು ಜಲಾವೃತ, ಸಂಚಾರ ಅಸ್ತವ್ಯಸ್ತ
13 ನಗರಗಳು ಮತ್ತು ಕೌಂಟಿಗಳಲ್ಲಿನ 1,002 ಮನೆಗಳ ಒಟ್ಟು 1,567 ಜನರನ್ನು ಶನಿವಾರ ಬೆಳಗ್ಗೆ ತಾತ್ಕಾಲಿಕ ಆಶ್ರಯ ಶಿಬಿರಗಳಿಗೆ ಕರೆತರಲಾಗಿದೆ. ಪ್ರವಾಹದಿಂದಾಗಿ ಅಪಾರ ಪ್ರಮಾಣದ ಆಸ್ತಿ, ಬೆಳೆ ಹಾನಿಯಾಗಿದೆ. ರಸ್ತೆಗಳು ಕೊಚ್ಚಿ ಹೋಗಿವೆ. ರಾಷ್ಟ್ರವ್ಯಾಪಿ 97 ರಸ್ತೆಗಳು ಮುಚ್ಚಲ್ಪಟ್ಟಿವೆ. 10 ಮಣ್ಣು ಕುಸಿತ, ಆರು ರಸ್ತೆ ಹಾನಿ ಪ್ರಕರಣಗಳು ಸೇರಿದಂತೆ ಸಾರ್ವಜನಿಕ ಆಸ್ತಿಗೆ ಹಾನಿಯಾದ ಮೂವತ್ತೊಂದು ಪ್ರಕರಣಗಳು ದಾಖಲಾಗಿವೆ. ಹಾಗೆಯೇ, 22 ಮನೆಗಳು ಸೇರಿದಂತೆ ಖಾಸಗಿ ಆಸ್ತಿಗೆ ಹಾನಿಯಾದ 71 ಕೇಸ್ಗಳು ವರದಿಯಾಗಿವೆ. ಹೆಚ್ಚಿನ ಸ್ಥಳಗಳಲ್ಲಿ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲಾಗಿದೆ. ಉತ್ತರ ಜಿಯೊಂಗ್‌ಸಾಂಗ್ ಪ್ರಾಂತ್ಯದ ಮುಂಗ್ಯೊಂಗ್, ಯೊಂಗ್ಜು ಮತ್ತು ಯೆಚಿಯೊನ್‌ನಲ್ಲಿನ 8,300 ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಕಡಿತಗೊಂಡಿದೆ.
ಇದನ್ನೂ ಓದಿ : ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಸ್ತೆ ಮೇಲೆ ವಿಷಕಾರಿ ಹಾವುಗಳು ಪ್ರತ್ಯಕ್ಷ.. ಜನರಿಗೆ ಆತಂಕ
ಜುಲೈ 9ರಿಂದ ದಕ್ಷಿಣ ಕೊರಿಯಾ ಮಳೆಯಿಂದ ತತ್ತರಿಸಿದೆ. ಕೊರಿಯಾದ ಹವಾಮಾನ ಆಡಳಿತವು ಜುಲೈ 18 ರವರೆಗೆ ವಿಶೇಷವಾಗಿ ಚುಂಚೊಂಗ್ ಮತ್ತು ಜಿಯೊಲ್ಲಾ ಪ್ರಾಂತ್ಯಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಮುಂದಿನ ವಾರಾಂತ್ಯದವರೆಗೆ ಜೆಜು ದ್ವೀಪ ಸೇರಿದಂತೆ ದೇಶಾದ್ಯಂತ ಅಧಿಕ ಮಳೆಯಾಗಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ : Heavy rain: ದೆಹಲಿಯಲ್ಲಿ ಎದೆ ಮಟ್ಟದ ನೀರಿನಲ್ಲೇ ಸೈಕಲ್ ರಿಕ್ಷಾ ಚಾಲನೆ - ವಿಡಿಯೋ