ಕಾಬೂಲ್( ಅಫ್ಘಾನಿಸ್ತಾನ): ತಾಲಿಬಾನ್ ಇಂದು ರಾಷ್ಟ್ರೀಯ ರಜೆ ಘೋಷಣೆ ಮಾಡಿದೆ. 20 ವರ್ಷಗಳ ಯುದ್ಧದ ನಂತರ ಅಫ್ಘಾನಿಸ್ತಾನದಿಂದ ಅಮೆರಿಕ ನೇತೃತ್ವದ ಪಡೆಗಳನ್ನು ಕಳೆದ ವರ್ಷ ಇದೇ ದಿನದಂದು ಅಮೆರಿಕ ವಾಪಸ್ ಪಡೆದುಕೊಂಡಿತ್ತು. ಹೀಗಾಗಿ ಇಂದು ಅಫ್ಘಾನಿಸ್ತಾನದಲ್ಲಿ ಮೊದಲ ವಾರ್ಷಿಕೋತ್ಸವ ಎಂದು ಘೋಷಿಸಲಾಗಿದ್ದು, ರಾಜಧಾನಿ ಕಾಬೂಲ್ ಅನ್ನು ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗಿದೆ.
ಅಮೆರಿಕ ಪಡೆಗಳು ಆಫ್ಘನ್ನಿಂದ ಕಾಲ್ಕಿಳುತ್ತಿದ್ದಂತೆ ಅಲ್ಲಿನ ಪ್ರಜಾಸತಾತ್ಮಕ ಸರ್ಕಾರವನ್ನು ತಾಲಿಬಾನಿಗಳು ಕೆಡವಿ, ತಾಲಿಬಾನ್ ಸರ್ಕಾರವನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದವು. ಈ ನಡುವೆ ತಾಲಿಬಾನ್ ಆಡಳಿತವನ್ನು ಬೇರೆ ಯಾವುದೇ ರಾಷ್ಟ್ರಗಳು ಅಧಿಕೃತವಾಗಿ ಮಾನ್ಯ ಮಾಡಿಲ್ಲ. ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಇಸ್ಲಾಮಿಕ್ ಕಾನೂನಿನ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ.
ತಾಲಿಬಾನ್ ಆಡಳಿತ ಇರುವ ಅಫ್ಘಾನಿಸ್ತಾನದಲ್ಲಿ ಮಹಿಳೆಯರನ್ನು ಸಾರ್ವಜನಿಕ ಜೀವನದಿಂದ ದೂರ ಇಡಲಾಗಿದೆ. ಮಹಿಳೆಯರ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಆದರೂ ಅಲ್ಲಿನ ಜನ ವಿದೇಶಿ ಆಡಳಿತ ತೆರಳಿದೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲಾಹನು ನಮ್ಮ ದೇಶದಿಂದ ನಾಸ್ತಿಕರನ್ನು ತೊಲಗಿಸಿ ಇಸ್ಲಾಮಿಕ್ ಎಮಿರೇಟ್ ಸ್ಥಾಪನೆಯಾದದ್ದು ನಮಗೆ ಸಂತೋಷ ತಂದಿದೆ ಎಂದು ಕಾಬೂಲ್ ನಿವಾಸಿಯೊಬ್ಬರು ಹೇಳಿಕೊಂಡಿದ್ದಾರೆ. ಕಳೆದ ವರ್ಷ ಆಗಸ್ಟ್ 31 ರಂದು ಅಮೆರಿಕ ಅಫ್ಘಾನಿಸ್ತಾನದಲ್ಲಿದ್ದ ತನ್ನ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳಲು ಆರಂಭ ಮಾಡಿತ್ತು. ನ್ಯೂಯಾರ್ಕ್‌ನಲ್ಲಿ ಸೆಪ್ಟೆಂಬರ್ 11, 2001ರಂದು ನಡೆದ ದಾಳಿಯ ನಂತರ ಅಫ್ಘಾನಿಸ್ತಾನದ ಮೇಲೆ ಅಮೆರಿಕ ಮಿಲಿಟರಿ ದಾಳಿ ನಡೆಸಿತ್ತು.
ಈ ಸಂಘರ್ಷದಲ್ಲಿ 66,000 ಆಫ್ಘನ್ ಸೈನಿಕರು ಮತ್ತು 48,000 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಇನ್ನೊಂದು ಕಡೆ 2461 ಅಮೆರಿಕನ್ ಸೈನಿಕರು ಸಹ ಈ ಯುದ್ಧದಲ್ಲಿ ತಮ್ಮ ಉಸಿರು ಚೆಲ್ಲಿದ್ದಾರೆ.
ಇದನ್ನು ಓದಿ:ರಷ್ಯಾದಲ್ಲಿ ವೋಸ್ಟಾಕ್ ಸಮರಾಭ್ಯಾಸ.. ಭಾರತ, ಚೀನಾ ರಾಷ್ಟ್ರಗಳ ಭಾಗವಹಿಸುವಿಕೆಗೆ ಅಮೆರಿಕ ಆಕ್ಷೇಪ