ಟೆಲ್ ಅವೀವ್ : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇರಾನಿನ ವಿರೋಧ ಪಕ್ಷದ ನಾಯಕ ವಹೀದ್ ಬೆಹೆಸ್ತಿ ಇಸ್ರೇಲ್ ಸಂಸತ್ತಿನಲ್ಲಿ ಭಾಗವಹಿಸಿ ಭಾಷಣ ಮಾಡಿದ್ದಾರೆ. ಇಸ್ರೇಲಿ ಸಂಸತ್ತಿನ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಇಸ್ಲಾಮಿಕ್ ಗಣರಾಜ್ಯದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಮಂಗಳವಾರ ನಡೆದ ನೆಸೆಟ್ ಇಸ್ರೇಲ್ ವಿಕ್ಟರಿ ಕಾಕಸ್ (ಕೆಐವಿಸಿ) ನ ಐತಿಹಾಸಿಕ ಸಭೆಯಲ್ಲಿ ಸಚಿವರು, ನೆಸೆಟ್ ಸದಸ್ಯರು, ಭದ್ರತೆ, ರಾಜತಾಂತ್ರಿಕ ಮತ್ತು ರಾಜಕೀಯ ನಾಯಕರು ಗಾಜಾದಲ್ಲಿನ ಮುಂದಿನ ಯೋಜನೆಗಳನ್ನು ಪ್ರಸ್ತುತಪಡಿಸಿದ್ದು, ಯುದ್ಧಭೂಮಿಯಲ್ಲಿ ಶಾಶ್ವತವಾದ ವಿಜಯವನ್ನು ಹೇಗೆ ದಾಖಲಿಸುವುದು ಎಂಬ ಬಗ್ಗೆ ಚರ್ಚಿಸಿದರು. ಈ ಚರ್ಚೆಗಳ ಮಧ್ಯೆ ಇರಾನಿನ ವಿರೋಧ ಪಕ್ಷದ ನಾಯಕ ವಹೀದ್ ಬೆಹೆಸ್ತಿ ಸಂಸತ್ತನ್ನುದ್ದೇಶಿಸಿ ಮಾತನಾಡಿದರು.
"ಶೀಘ್ರದಲ್ಲೇ ನೀವು ದೊಡ್ಡ ಸಮಸ್ಯೆಯೊಂದಿಗೆ ಹೋರಾಡಬೇಕಾಗುತ್ತದೆ. ಆ ಸಮಸ್ಯೆ ಇರಾನ್ ಸರ್ಕಾರ. ಇರಾನಿನ ನೆಲೆಗಳ ಮೇಲೆ ದಾಳಿ ಮಾಡಲು ನೀವು ಹೆದರಬಾರದು. ದಾಳಿಯೊಂದೇ ಅವರಿಗೆ ಅರ್ಥವಾಗುವ ಏಕೈಕ ಭಾಷೆ." ಎಂದು ತಮ್ಮ ಭಾಷಣದಲ್ಲಿ ಬೆಹೆಸ್ತಿ ಹೇಳಿದರು.
ಇರಾನ್ನ ವಿರೋಧ ಪಕ್ಷದ ನಾಯಕ ಬೆಹೆಸ್ತಿ ಪ್ರಸ್ತುತ ಲಂಡನ್ ನಲ್ಲಿ ವಾಸಿಸುತ್ತಿದ್ದಾರೆ. ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ ಅದನ್ನು ನಿಷೇಧಿಸುವಂತೆ ಬ್ರಿಟಿಷ್ ಸರ್ಕಾರಕ್ಕೆ ಆಗ್ರಹಿಸಿ ಬೆಹೆಸ್ತಿ 72 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇದರ ನಂತರ ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ.
"ಇರಾನ್ನ 80 ಮಿಲಿಯನ್ ಜನತೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ಹಾತೊರೆಯುತ್ತಿರುವುದು ಖುಷಿಯ ಸಂಗತಿಯಾಗಿದೆ. 2009 ರಿಂದಲೂ ಆಡಳಿತಾರೂಢ ಸರ್ಕಾರವನ್ನು ಕಿತ್ತೊಗೆಯಲು ಅವರು ಪ್ರಯತ್ನಿಸುತ್ತಿದ್ದರೂ ಸಫಲರಾಗಿಲ್ಲ" ಎಂದು ಬೆಹೆಸ್ತಿ ಇಸ್ರೇಲ್ ಸರ್ಕಾರಕ್ಕೆ ಕರೆ ನೀಡಿದರು.
ಒಂದು ವೇಳೆ ಇಸ್ರೇಲ್ ಸರ್ಕಾರ ಇರಾನಿನ ಜನರನ್ನು ಬೆಂಬಲಿಸಿದರೆ, ಆಡಳಿತಾರೂಢ ಸರ್ಕಾರ ಉರುಳುತ್ತದೆ ಮತ್ತು ಪ್ರತಿಯೊಬ್ಬರೂ ಶಾಂತಿಯಿಂದ ನೆಲೆಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. "ಇರಾನ್ ಸರ್ಕಾರವು 44 ವರ್ಷಗಳಲ್ಲಿಯೇ ಅತ್ಯಂತ ದುರ್ಬಲವಾಗಿದೆ. ಅಕ್ಟೋಬರ್ 7 ರ ದಾಳಿಯ ಬಗ್ಗೆ ಅವರಿಗೆ ಮೊದಲೇ ತಿಳಿದಿತ್ತು. ಭಯಾನಕ ದಾಳಿಯ ನಂತರ ಎರಡು ತಿಂಗಳಲ್ಲಿ ಸಂಪೂರ್ಣ ಕದನ ವಿರಾಮ ಆಗುತ್ತದೆ ಎಂದು ಅವರು ಭಾವಿಸಿದ್ದರು, ಆದರೆ ಅದು ಹಾಗಾಗಲಿಲ್ಲ" ಎಂದು ಅವರು ತಿಳಿಸಿದರು.
ಇದನ್ನೂ ಓದಿ : 5 ಲಕ್ಷ ಅಕ್ರಮ ವಲಸಿಗರನ್ನು ಹೊರಹಾಕಿದ ಪಾಕಿಸ್ತಾನ