ಖಾರ್ಟೂಮ್ (ಸುಡಾನ್) : ಸುಡಾನ್‌ನಲ್ಲಿ ನಡೆಯುತ್ತಿರುವ ಸಶಸ್ತ್ರ ಸಂಘರ್ಷದಿಂದ ಹಸಿವು ಮತ್ತು ಜನರ ಸ್ಥಳಾಂತರ ಸಮಸ್ಯೆಗಳು ನಿಯಂತ್ರಣ ಮೀರಿ ಹೋಗುತ್ತಿವೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಸುಡಾನ್‌ನಲ್ಲಿನ 6 ದಶಲಕ್ಷಕ್ಕೂ ಹೆಚ್ಚು ಜನ ಅಂದರೆ ಒಟ್ಟು ಜನಸಂಖ್ಯೆಯ ಸುಮಾರು 13 ಪ್ರತಿಶತದಷ್ಟು ಜನರು ಈಗ ಕ್ಷಾಮದಿಂದ ಒಂದೇ ಹೆಜ್ಜೆ ದೂರದಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (OCHA) ಹೇಳಿದೆ.
ಹಿಂಸಾತ್ಮಕ ಸಂಘರ್ಷ, ಆರ್ಥಿಕ ಕುಸಿತ ಮತ್ತು ಸಾಮೂಹಿಕ ಸ್ಥಳಾಂತರದಿಂದಾಗಿ ಸುಡಾನ್‌ನಾದ್ಯಂತ 20 ಮಿಲಿಯನ್‌ಗಿಂತಲೂ ಹೆಚ್ಚು ಜನರು ತೀವ್ರ ಆಹಾರ ಅಭದ್ರತೆ ಎದುರಿಸುತ್ತಿದ್ದಾರೆ. ರಕ್ತಸಿಕ್ತ ಘರ್ಷಣೆಯಲ್ಲಿ 3,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 6,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಂಘರ್ಷದಲ್ಲಿ ತೊಡಗಿರುವ ಸುಡಾನ್ ಸಶಸ್ತ್ರ ಪಡೆಗಳು ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳು ಜನರ ಸಾವಿಗೆ ಪರಸ್ಪರರನ್ನು ದೂಷಿಸುತ್ತಿವೆ.
ಯುನಿಸೆಫ್ ವರದಿ ಹೇಳುವುದೇನು?: ಯುನಿಸೆಫ್ ಪ್ರಕಾರ, ಕನಿಷ್ಠ 435 ಮಕ್ಕಳು ಸಾವನ್ನಪ್ಪಿವೆ ಮತ್ತು ಕೆಲವು 2,025 ಮಕ್ಕಳು ಗಾಯಗೊಂಡಿವೆ ಎಂದು ವರದಿಯಾಗಿದೆ. ಏಪ್ರಿಲ್ 15 ರಂದು ಹಿಂಸಾಚಾರ ಭುಗಿಲೆದ್ದ ನಂತರ 2,500 ತೀವ್ರ ರೀತಿಯ ಮಕ್ಕಳ ಹಕ್ಕುಗಳ ಉಲ್ಲಂಘನೆಯ ದೂರುಗಳು ಬಂದಿರುವುದಾಗಿ ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನಿಸೆಫ್ ತಿಳಿಸಿದೆ. ಅಂದರೆ ಪ್ರತಿದಿನ ಕನಿಷ್ಠ ಪ್ರತಿ ತಾಸಿಗೆ ಒಂದರಂತೆ ಮಕ್ಕಳ ಹಕ್ಕುಗಳ ಉಲ್ಲಂಘನೆಯ ದೂರು ಬರುತ್ತಿವೆ. ಇಲ್ಲಿಯವರೆಗೆ, ದೇಶದ ಒಳಗೆ ಮತ್ತು ಹೊರಗೆ 3.5 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ.
ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್ ಪ್ರಕಾರ ಜುಲೈ 25 ರ ಹೊತ್ತಿಗೆ ಸುಮಾರು 2.7 ಮಿಲಿಯನ್ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. ದೇಶದ ಎಲ್ಲ 18 ರಾಜ್ಯಗಳಾದ್ಯಂತ ಜನರು ಸ್ಥಳಾಂತರಗೊಂಡಿದ್ದಾರೆ. ನೈಲ್ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಅತ್ಯಧಿಕ ಜನ ಸ್ಥಳಾಂತರಗೊಂಡಿದ್ದು, ಇದರ ನಂತರ ಉತ್ತರ, ವೈಟ್ ನೈಲ್ ಮತ್ತು ಸೆನ್ನಾರ್ ರಾಜ್ಯಗಳ ಜನ ಅತ್ಯಧಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಸ್ಥಳಾಂತಗೊಂಡ ಒಟ್ಟು ಜನರ ಪೈಕಿ ಶೇ 73ರಷ್ಟು ಜನ ಖಾರ್ಟೂಮ್ ಮೂಲದವರಾಗಿದ್ದಾರೆ.
8,55,000 ನಿರಾಶ್ರಿತರು, ಆಶ್ರಯ ಪಡೆದವರು ಮತ್ತು ಮರಳಿ ಬಂದವರು ಈಗ ಮಧ್ಯ ಆಫ್ರಿಕನ್ ರಿಪಬ್ಲಿಕ್, ಚಾಡ್, ಈಜಿಪ್ಟ್, ಇಥಿಯೋಪಿಯಾ ಮತ್ತು ದಕ್ಷಿಣ ಸುಡಾನ್ ಸೇರಿದಂತೆ ನೆರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ ಎಂದು ಯುಎನ್ ನಿರಾಶ್ರಿತರ ಏಜೆನ್ಸಿ ತಿಳಿಸಿದೆ. ದೇಶಾದ್ಯಂತ ಆಸ್ಪತ್ರೆಗಳ ಮೇಲೆ ದಾಳಿಗಳು ನಡೆಯುತ್ತಲೇ ಇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಹಿಂಸಾಚಾರ ಪ್ರಾರಂಭವಾದಾಗಿನಿಂದ, WHO ಇಂಥ 53 ದಾಳಿಗಳನ್ನು ದಾಖಲಿಸಿದೆ. ಈ ದಾಳಿಗಳ ಪರಿಣಾಮವಾಗಿ 11 ಜನ ಸಾವಿಗೀಡಾಗಿದ್ದು, 38 ಜನ ಗಾಯಗೊಂಡಿದ್ದಾರೆ.
ಏಪ್ರಿಲ್ 15 ರಂದು ಸೈನ್ಯ ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (RSF) ನಡುವೆ ಭೀಕರ ಸಂಘರ್ಷ ಆರಂಭವಾಗಿದೆ. ಸಶಸ್ತ್ರ ಹೋರಾಟದಿಂದ ರಾಜಧಾನಿ ಖಾರ್ಟೂಮ್ ರಕ್ತಸಿಕ್ತ ಯುದ್ಧಭೂಮಿಯಾಗಿ ಪರಿವರ್ತನೆಯಾಘಿದೆ. ನಂತರ ಹೋರಾಟವು ಡಾರ್ಫರ್ ಪ್ರದೇಶಕ್ಕೆ ಮತ್ತು ಕೊರ್ಡೋಫಾನ್ ಮತ್ತು ಬ್ಲೂ ನೈಲ್ ರಾಜ್ಯಗಳ ಭಾಗಗಳಿಗೆ ಹರಡಿತು.
ಇದನ್ನೂ ಓದಿ : Cannabis Cultivation: ದೇಶದ ಖಜಾನೆ ತುಂಬಿಸಲು ಗಾಂಜಾ ಕೃಷಿಗೆ ಮುಂದಾದ ಶ್ರೀಲಂಕಾ ಸರ್ಕಾರ!