ಕೊಲಂಬೊ : ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿ ತುರ್ತು ಪರಿಸ್ಥಿತಿ ಹೇರಿದ ಮಧ್ಯೆಯೇ ದೇಶದ ಪ್ರಧಾನಿ ಮಹಿಂದಾ ರಾಜಪಕ್ಸ ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಇದು ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ನೇತೃತ್ವದಲ್ಲಿ 'ಸರ್ವಪಕ್ಷ ಸರ್ಕಾರ' ರಚನೆ ಮಾಡುವ ನಿರ್ಧಾರಕ್ಕೆ ಬಲ ಬಂದಿದೆ.
ಈಚೆಗೆ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ಮಹಿಂದಾ ರಾಜಪಕ್ಸ ಅವರ ಬಳಿಕ ಮನವಿ ಮಾಡಿದ್ದರು. ಇದಕ್ಕೆ ಮಹಿಂದಾ ರಾಜಪಕ್ಸ ಸಮ್ಮತಿ ಸೂಚಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ದೇಶದ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಫಲವಾದ ಕಾರಣ ಮಹಿಂದಾ ರಾಜಪಕ್ಸ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಸಚಿವ ಸಂಪುಟದಲ್ಲಿ ಘೋಷಿಸಲಾಗಿದೆ. ಈ ಮೂಲಕ ಸಚಿವ ಸಂಪುಟವೂ ವಿಸರ್ಜನೆಗೂ ಸುಳಿವು ನೀಡಲಾಗಿದೆ.
ತಮ್ಮ ರಾಜೀನಾಮೆಯಿಂದ ಆರ್ಥಿಕ ಬಿಕ್ಕಟ್ಟು ಶಮನವಾಗಲಿದೆ ಎಂದಾದರೆ ಅದಕ್ಕೆ ತಾವು ಸಿದ್ಧ ಎಂದು ಮಹಿಂದಾ ರಾಜಪಕ್ಸ ಅವರು ಇದೇ ವೇಳೆ ಹೇಳಿದ್ದಾರೆ. ಜನರ ತೀವ್ರ ಪ್ರತಿಭಟನೆಯ ನಡುವೆ ದೇಶದಲ್ಲಿ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ನಿರ್ವಹಿಸುವುದು ಗಂಭೀರ ಸಮಸ್ಯೆಯಾಗಿದೆ ಎಂದು ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ದೇಶ ಆರ್ಥಿಕವಾಗಿ ದಿವಾಳಿಯಾದ ಕಾರಣ ಪ್ರವಾಸಿಗರ ಸಂಖ್ಯೆಯೂ ಕ್ಷೀಣಿಸಿದೆ. ಇದಲ್ಲದೇ, ಕಾರ್ಖಾನೆಗಳ ಮುಚ್ಚುವಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಹಿಂದಾ ರಾಜಪಕ್ಸ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವ ನಿರ್ಧಾರವನ್ನು ಸಂಪುಟದ ಕೆಲ ಸಚಿವರು ಅಂಗೀಕರಿಸಿದರೆ, ಇನ್ನೂ ಕೆಲವರು ರಾಜೀನಾಮೆ ಪರಿಸ್ಥಿತಿ ಸುಧಾರಿಸುವ ಹಾದಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಓದಿ: ರಷ್ಯಾ ಪಡೆಗಳನ್ನು ಹಿಂಪಡೆದರೆ ನಾವು ಮಾತುಕತೆಗೆ ಸಿದ್ಧ: ಝೆಲೆನ್ಸ್ಕಿ