ಕೊಲಂಬೊ (ಶ್ರೀಲಂಕಾ): ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ನೆರೆರಾಷ್ಟ್ರ ಶ್ರೀಲಂಕಾದ ಜನತೆ ಗುರುವಾರ ಅಧ್ಯಕ್ಷ ಗೋಟಬಯ ರಾಜಪಕ್ಸೆ ನಿವಾಸದ ಮುಂಭಾಗ ಪ್ರತಿಭಟನೆ ನಡೆಸಿ, ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಪತ್ರಕರ್ತರು ಸೇರಿದಂತೆ ಕನಿಷ್ಠ ಹತ್ತು ಜನರು ಗಾಯಗೊಂಡಿದ್ದಾರೆ.
ಮಿರಿಹಾನದಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಅರೆಸೇನಾ ಪೊಲೀಸ್ ಘಟಕ, ವಿಶೇಷ ಕಾರ್ಯಪಡೆಯನ್ನು ಕರೆಸಬೇಕಾಯಿತು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಗಾಯಗೊಂಡ ಆರು ಜನರನ್ನು ಕೊಲಂಬೊ ರಾಷ್ಟ್ರೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ನಾಲ್ವರನ್ನು ಕಲುಬೋವಿಲಾದ ಕೊಲಂಬೊ ಸೌತ್ ಬೋಧನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಶ್ರೀಲಂಕಾ ಸೇನೆಗೆ ಸೇರಿದ ಬಸ್ ಮತ್ತು ಜೀಪ್‌ಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎನ್ನಲಾಗಿದೆ. ಕೊಲಂಬೊದ ಹಲವಾರು ಪ್ರದೇಶಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದ್ದು, ಸ್ವಾತಂತ್ರ್ಯ ಸಿಕ್ಕ ನಂತರ ಇದೇ ಮೊದಲ ಬಾರಿಗೆ ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ.
ಕೋವಿಡ್ -19 ಕಾರಣದಿಂದಾಗಿ ದೇಶದ ಪ್ರವಾಸೋದ್ಯಮ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದೆ. ವಿದೇಶಿ ವಿನಿಮಯ ಕೊರತೆಯನ್ನು ಎದುರಿಸುತ್ತಿದೆ, ಶ್ರೀಲಂಕಾದಲ್ಲಿ ಪ್ರತಿದಿನ ಕನಿಷ್ಠ 10 ಗಂಟೆಗಳ ಕಾಲ ವಿದ್ಯುತ್ ಕಡಿತವಾಗುತ್ತಿದೆ. ಇದರ ಜೊತೆಗೆ, ಜನರಿಗೆ ಕಳೆದ ಕೆಲವು ವಾರಗಳಿಂದ ಆಹಾರ ಮತ್ತು ಅಗತ್ಯ ವಸ್ತುಗಳು, ಇಂಧನ ಮತ್ತು ಅನಿಲದ ಕೊರತೆ ಎದುರಾಗಿದೆ.
ಇದನ್ನೂ ಓದಿ: 19 ಕೆಜಿ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ₹250 ಏರಿಕೆ