ಸಿಂಗಾಪುರ: ಚೀನಾ ದೇಶದ ಕ್ಯಾಬ್ ಚಾಲಕನೊಬ್ಬ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮತ್ತು ಆಕೆಯ ಮಗಳನ್ನು ನಿಂದಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ಚಾಲಕ ತಾಯಿ ಮತ್ತು ಮಗಳು ಭಾರತೀಯ ಮೂಲದವರೆಂದು ಭಾವಿಸಿ ಉದ್ದೇಶಪೂರ್ವಕವಾಗಿ ನಿಂದಿಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಘಟನೆಯ ವಿವರ: ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್ ಟಾಟಾ ಮೂಲಕ ಮಹಿಳೆ ಕ್ಯಾಬ್ ಬುಕ್ ಮಾಡಿದ್ದರು. ಯುರೇಷಿಯನ್ ಮೂಲದ ಮಹಿಳೆ ತನ್ನ ಒಂಬತ್ತು ವರ್ಷದ ಮಗಳೊಂದಿಗೆ ಪ್ರಯಾಣಿಸುತ್ತಿದ್ದರು. ಮುಂಬರುವ ಮೆಟ್ರೋ ಮಾರ್ಗದ ನಿರ್ಮಾಣದಿಂದಾಗಿ ರಸ್ತೆಯ ಒಂದು ಭಾಗವನ್ನು ನಿರ್ಬಂಧಿಸಲಾಗಿತ್ತು. ಆದ್ರೆ ಇದರಿಂದ ಚಾಲಕ ಇದ್ದಕ್ಕಿದ್ದಂತೆ ಅಸಮಾಧಾನಗೊಂಡಿದ್ದಾನೆ. ಇದಕ್ಕೂ ಮುನ್ನ ನಮ್ಮ ಪ್ರಯಾಣ ಶಾಂತಿಯುತವಾಗಿಯೇ ಸಾಗುತ್ತಿತ್ತು ಎಂದು ಮಹಿಳೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಸಮಾಧಾನಗೊಂಡ ಚಾಲಕ ನಮ್ಮ ಮೇಲೆ ಕೂಗಾಡಲು ಆರಂಭಿಸಿದ. ನಾನು ಚಾಲಕನಿಗೆ ತಪ್ಪು ವಿಳಾಸ ಮತ್ತು ತಪ್ಪು ನಿರ್ದೇಶನಗಳನ್ನು ನೀಡಿದ್ದೇನೆ ಎಂದು ನನ್ನ ಮೇಲೆ ರೇಗಿದ್ದಾನೆ. ಹೀಗೆ ಮಾತಿಗೆ ಮಾತು ಬೆಳೆಯಿತು. ನಮ್ಮಿಬ್ಬರ ಸಂಭಾಷಣೆಯನ್ನು ನನ್ನ ಮಗಳು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದು, ನಂತರ ಸೆರೆ ಹಿಡಿದ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಇತರರು ಆ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಂಡರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
"ನೀವು ಭಾರತೀಯರು, ನಾನು ಚೈನೀಸ್. ನೀವು ತುಂಬಾ ಮೂರ್ಖರು..." ಎಂದು ಚಾಲಕ ನಿಂದಿಸಿದ್ದಾರೆ. "ನಾನು ಸಿಂಗಾಪುರದ ಯುರೇಷಿಯನ್, ಭಾರತೀಯನಲ್ಲ" ಎಂದು ಆತನಿಗೆ ತಿಳಿಹೇಳಿದೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಈ ಘಟನೆ ಕುರಿತು ಟಾಡಾ ತನಿಖೆ ಕೈಗೊಂಡಿದೆ.
ಟಾಡಾ ಮಾರ್ಗಸೂಚಿಗಳೇನು?: ಜನಾಂಗೀಯ ಪಕ್ಷಪಾತವನ್ನು ಪ್ರಚೋದಿಸುವ ಕಾಮೆಂಟ್‌ಗಳು TADA ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತವೆ. ಈ ಘಟನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಾವು ಆಂತರಿಕ ತನಿಖೆ ಪ್ರಾರಂಭಿಸಿದ್ದೇವೆ. ನಮ್ಮ ತನಿಖೆಯ ಆಧಾರದ ಮೇಲೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಯಾವುದೇ ಸಂದರ್ಭದಲ್ಲೂ ಜನಾಂಗೀಯ ಕಾಮೆಂಟ್‌ಗಳನ್ನು ಅಥವಾ ಟೀಕೆಗಳನ್ನು ಟಾಡಾ ಕ್ಷಮಿಸುವುದಿಲ್ಲ. ಸಮಸ್ಯೆಯನ್ನು ಆದಷ್ಟು ಬೇಗ ನ್ಯಾಯಯುತವಾಗಿ ಪರಿಹರಿಸಲು ಬದ್ಧ ಎಂದು ಟಾಡಾ ಹೇಳಿದೆ.
ಇದನ್ನೂ ಓದಿ: ರಾಮನಗರ: ಗಣೇಶ ನಿಮಜ್ಜನ ವೇಳೆ ಹಾರ್ನ್ ಹಾಕಿದ ಚಾಲಕನಿಗೆ ಹಲ್ಲೆ, ವಾಹನಕ್ಕೆ ಕಲ್ಲು