ಡೈರ್ ಅಲ್ ಬಾಲಾಹ್(ಗಾಜಾ): ಇಸ್ರೇಲ್ ಸೇನೆಯ ದಾಳಿಯಲ್ಲಿ ಉತ್ತರ ಗಾಜಾದ ಉಸ್ತುವಾರಿ ಅಹ್ಮದ್ ಅಲ್ ಘಂಡೂರ್ ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ಹಮಾಸ್ ತಿಳಿಸಿದೆ. ಆದರೆ, ಯಾವಾಗ ಮತ್ತು ಎಲ್ಲಿ ಘಟನೆ ನಡೆಯಿತು ಎಂಬುದನ್ನು ಸಂಘಟನೆ ಬಹಿರಂಗಪಡಿಸಿಲ್ಲ. ಇನ್ನೂ ಮೂವರು ಸೇನಾ ನಾಯಕರು ಕೂಡ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಇಸ್ರೇಲ್‌ನೊಂದಿಗೆ ನಡೆಯುತ್ತಿರುವ ಯುದ್ಧದಲ್ಲಿ ಅಹ್ಮದ್ ಹಮಾಸ್‌ನ ಪ್ರಮುಖ ಸದಸ್ಯನಾಗಿದ್ದ. ಈತ ಉತ್ತರ ಗಾಜಾದ ಬ್ರಿಗೇಡ್ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು ಎಂದು ಅಂತರರಾಷ್ಟ್ರೀಯ ವರದಿಗಳು ತಿಳಿಸಿವೆ.
2017ರಲ್ಲಿ ಅಮೆರಿಕ ಈತನನ್ನು 'ಅಂತರರಾಷ್ಟ್ರೀಯ ಭಯೋತ್ಪಾದಕರ ಪಟ್ಟಿ'ಗೆ ಸೇರಿಸಿ ಆರ್ಥಿಕ ನಿರ್ಬಂಧಗಳನ್ನು ಹೇರಿತ್ತು. ಇದಕ್ಕೂ ಮೊದಲು ಇಸ್ರೇಲ್ ಸೇನೆಯು ಭಯೋತ್ಪಾದಕರಾದ ಬಿಲಾಲ್ ಅಲ್ ಕೇದ್ರಾ, ಹಮಾಸ್ ವೈಮಾನಿಕ ಪಡೆಯ ಮುಖ್ಯಸ್ಥ ಅಬು ಮುರಾದ್, ನಕ್ಬಾ ಘಟಕದ ಕಮಾಂಡರ್‌ಗಳಾದ ಅಹ್ಮದ್ ಮೌಸಾ ಮತ್ತು ನಿರಿಮ್ ಹತ್ಯಾಕಾಂಡಕ್ಕೆ ಕಾರಣವಾದ ಅಮರ್ ಅಲ್ಹಂದಿ ಎಂಬವರನ್ನು ಹೊಡೆದುರುಳಿಸಿತ್ತು.
8 ಪ್ಯಾಲೆಸ್ಟೀನಿಯರು ಸಾವು: ಇಸ್ರೇಲ್-ಹಮಾಸ್ ನಡುವಿನ ಕದನ ವಿರಾಮ ಜಾರಿಯಲ್ಲಿರುವಾಗಲೇ ಪಶ್ಚಿಮ ದಂಡೆಯಲ್ಲಿ ಉದ್ವಿಗ್ನತೆ ಮುಂದುವರಿದಿದೆ. 24 ಗಂಟೆಗಳ ಅವಧಿಯಲ್ಲಿ ಇಸ್ರೇಲಿ ಪಡೆಗಳು ಎಂಟು ಪ್ಯಾಲೆಸ್ತೀನಿಯರನ್ನು ಗುಂಡಿಕ್ಕಿ ಕೊಂದಿವೆ ಎಂದು ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ಆರೋಪಿಸಿದೆ.
ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ಐವರು ಸಾವನ್ನಪ್ಪಿದ್ದಾರೆ. ಪಶ್ಚಿಮ ದಂಡೆಯಲ್ಲಿ ಒಬ್ಬರು ಮತ್ತು ಇತರ ಪ್ರದೇಶಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ಹೇಳಿದೆ. ಈ ಬಗ್ಗೆ ಇಸ್ರೇಲ್ ಪಡೆಗಳು ಹೇಳಿಕೆ ನೀಡಿವೆ. ಇಸ್ರೇಲಿ ಪ್ರಜೆಗಳಾದ ತಂದೆ ಮತ್ತು ಮಗನನ್ನು ಕಾರಿನಿಂದ ಎಳೆದು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಹೋದಾಗ ಗುಂಡಿನ ದಾಳಿ ನಡೆಸಿರುವುದಾಗಿ ಸೇನೆ ತಿಳಿಸಿದೆ. ಈ ಘಟನೆಯಲ್ಲಿ ಮೃತಪಟ್ಟವರೆಲ್ಲರೂ ಭಯೋತ್ಪಾದಕರು ಎಂದು ಮಾಹಿತಿ ನೀಡಿದೆ.
17 ಒತ್ತೆಯಾಳುಗಳ ಬಿಡುಗಡೆ: ಮತ್ತೊಂದೆಡೆ, ಹಮಾಸ್ ಭಾನುವಾರ 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 14 ಇಸ್ರೇಲಿ ನಾಗರಿಕರು ಮತ್ತು ಮೂವರು ವಿದೇಶಿಯರಿದ್ದಾರೆ. ಕದನ ವಿರಾಮ ಒಪ್ಪಂದದಡಿ ಈಗಾಗಲೇ ಎರಡು ಹಂತಗಳಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿರುವ ಹಮಾಸ್, ಇತ್ತೀಚೆಗೆ ಮೂರನೇ ಬ್ಯಾಚ್‌ನಲ್ಲಿ ಒತ್ತೆಯಾಳುಗಳನ್ನು ಈಜಿಪ್ಟ್ ಮೂಲಕ ಇಸ್ರೇಲ್ಗೆ ಹಸ್ತಾಂತರಿಸಿದೆ.
ಇದನ್ನೂ ಓದಿ: ಕದನ ವಿರಾಮ: ಹಮಾಸ್ನಿಂದ 25 ಒತ್ತೆಯಾಳುಗಳ ಬಿಡುಗಡೆ, ಇಸ್ರೇಲ್ನಿಂದ 39 ಪ್ಯಾಲೆಸ್ತೀನ್ ಕೈದಿಗಳು ಬಂಧಮುಕ್ತ
ಇದಕ್ಕೂ ಮುನ್ನು ತಾತ್ಕಾಲಿಕ ಕದನ ವಿರಾಮ ಒಪ್ಪಂದದ ಭಾಗವಾಗಿ ಹಮಾಸ್ನಿಂದ 25 ಒತ್ತೆಯಾಳುಗಳು ಮತ್ತು ಇಸ್ರೇಲ್ನಿಂದ 39 ಪ್ಯಾಲೆಸ್ತೀನ್ ಕೈದಿಗಳನ್ನು ಬಂಧಮುಕ್ತಗೊಳಿಸಲಾಗಿತ್ತು.