ಮಾಸ್ಕೋ (ರಷ್ಯಾ): ಇಂಜಿನ್ನಲ್ಲಿನ ತಾಂತ್ರಿಕ ದೋಷದಿಂದಾಗಿ ಲೂನಾ 25 ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಅಪ್ಪಳಿಸಿ ಪತನವಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ಮುಖ್ಯಸ್ಥ ಹೇಳಿದ್ದಾರೆ. ಈ ವೈಫಲ್ಯಕ್ಕೆ ದೇಶದ ಚಂದ್ರನ ಪರಿಶೋಧನೆಯಲ್ಲಿ ದಶಕಗಳ ಕಾಲ ನೀಡಿದ್ದ ವಿರಾಮ ಕಾರಣ ಎಂದು ಅವರು ವಿಶ್ಲೇಷಣೆ ಮಾಡಿದ್ದಾರೆ.
ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸುವ ಮೊದಲ ಬಾಹ್ಯಾಕಾಶ ನೌಕೆಯಾಗುವ ಗುರಿಯೊಂದಿಗೆ ಪೈಲಟ್‌ರಹಿತ ಲೂನಾ 25 ಅನ್ನು ಸೋಮವಾರ ಇಳಿಸಲು ನಿರ್ಧರಿಸಲಾಗಿತ್ತು. ಈ ಪ್ರದೇಶದಲ್ಲಿ ಹೆಪ್ಪುಗಟ್ಟಿದ ನೀರು ಮತ್ತು ಅಮೂಲ್ಯ ಅಂಶಗಳ ಪ್ರಮುಖ ನಿಕ್ಷೇಪಗಳ ಅಸ್ತಿತ್ವ ಕುರಿತು ಅನ್ವೇಷಣೆ ನಡೆಸಲು ವಿಜ್ಞಾನಿಗಳು ಉದ್ದೇಶಿಸಿದ್ದರು.
ಇದನ್ನೂ ಓದಿ: Luna-25: 47 ವರ್ಷದ ಬಳಿಕ ಚಂದ್ರನಲ್ಲಿಗೆ ಹಾರಿದ ರಷ್ಯಾ ನೌಕೆ; ಚಂದ್ರಯಾನ-3 ಜೊತೆಗೇ ಇಳಿಯಬಹುದು ಲ್ಯಾಂಡರ್!
ಲೂನಾ 25 ಅನ್ನು ಲ್ಯಾಂಡಿಂಗ್ ಪೂರ್ವ ಕಕ್ಷೆಗೆ ಸೇರಿಸಲು ವಾರಾಂತ್ಯದಲ್ಲಿ ಬಾಹ್ಯಾಕಾಶ ನೌಕೆಯ ಇಂಜಿನ್‌ಗಳನ್ನು ಆನ್ ಮಾಡಲಾಯಿತು. ಆದರೆ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಕೊಂಡಿತು. ಯೋಜಿತ 84 ಸೆಕೆಂಡುಗಳ ಬದಲಿಗೆ, ಇದು 127 ಸೆಕೆಂಡುಗಳವರೆಗೆ ಕೆಲಸ ಮಾಡಿದೆ. ಇದು ಲ್ಯಾಂಡರ್ ಪತನಕ್ಕೆ ಮುಖ್ಯ ಕಾರಣ ಎಂದು ರೋಸ್ಕೋಸ್ಮಾಸ್ ಡೈರೆಕ್ಟರ್ ಜನರಲ್ ಯೂರಿ ಬೋರಿಸೊವ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ರೋಸ್ಕೊಸ್ಮಾಸ್ ಶನಿವಾರ ಸ್ಥಳೀಯ ಕಾಲಮಾನ 2:57 ರವರೆಗೆ ಬಾಹ್ಯಾಕಾಶ ನೌಕೆಯೊಂದಿಗೆ ಸಂಪರ್ಕ ಹೊಂದಿತ್ತು. ಸಂವಹನ ಕಳೆದುಕೊಂಡಾಗ ಸಾಧನವು ಚಂದ್ರನ ಕಕ್ಷೆಗೆ ಹಾದುಹೋಗಿ ಚಂದ್ರನ ಮೇಲ್ಮೈಗೆ ಅಪ್ಪಳಿಸಿತು ಎಂದು ಅವರು ಹೇಳಿದರು.
ಪ್ರತಿಷ್ಠೆಯ ಮಿಷನ್‌ಗೆ ಹೊಡೆತ: ಈ ಹಿಂದೆ ಇದ್ದ ಸೋವಿಯತ್ ಒಕ್ಕೂಟದ ಅವಧಿಯಲ್ಲಿ ರಷ್ಯಾದ ಕೊನೆಯ ಚಂದ್ರಯಾನ ಲೂನಾ-24 ಅನ್ನು 1976ರಲ್ಲಿ ರವಾನೆ ಮಾಡಲಾಗಿತ್ತು. ಇದು ಸುಮಾರು 170 ಗ್ರಾಂ ಚಂದ್ರನ ಮಾದರಿಗಳನ್ನು ಸಂಗ್ರಹಿಸಿ ಯಶಸ್ವಿಯಾಗಿ ಭೂಮಿಗೆ ತಲುಪಿಸಿತ್ತು. 47 ವರ್ಷಗಳ ಬಳಿಕ ಇದು ರಷ್ಯಾದ ಮೊದಲ ಕಾರ್ಯಾಚರಣೆ ಆಗಿತ್ತು. 1957 ರಲ್ಲಿ ಸ್ಪುಟ್ನಿಕ್ 1 ನೌಕೆಯನ್ನ ಚಂದ್ರನ ಅಧ್ಯಯನಕ್ಕಾಗಿ ರಷ್ಯಾ ಹಾರಿಬಿಟ್ಟಿತ್ತು. ಇದಾದ ಬಳಿಕ ಮಾನವ ಸಹಿತ ಗಗನಯಾನ ಕೈಗೊಂಡಿದ್ದ ರಷ್ಯಾ ಸೋವಿಯತ್ ಗಗನಯಾತ್ರಿ ಯೂರಿ ಗಗಾರಿನ್ ಅವರನ್ನು ಮೊದಲ ಬಾರಿಗೆ ಅಂತರಿಕ್ಷಕ್ಕೆ ಕಳುಹಿಸಿತ್ತು. ಇದರ ಬಳಿಕ ಅಂದರೆ 47 ವರ್ಷಗಳ ಮಳಿಕ ಮತ್ತೆ ಚಂದ್ರನ ಅಂಗಳಕ್ಕೆ ಇಳಿಯುವ ಸಾಹಸ ಕೊನೆ ಕ್ಷಣದಲ್ಲಿ ವಿಫಲವಾಗಿದೆ.
ಇದನ್ನೂ ಓದಿ ರಷ್ಯಾದ Luna-25 ಚಂದ್ರಯಾನ ನೌಕೆಯಲ್ಲಿ ತಾಂತ್ರಿಕ ದೋಷ
ಈವರೆಗೆ ಕೇವಲ ಮೂರು ದೇಶಗಳು ಮಾತ್ರ ಚಂದ್ರನ ಮೇಲೆ ಯಶಸ್ವಿಯಾಗಿ ತಮ್ಮ ಬಾಹ್ಯಕಾಶ ನೌಕೆಗಳನ್ನು ಇಳಿಸಿವೆ. ಅವುಗಳಲ್ಲಿ ಸೋವಿಯತ್ ಒಕ್ಕೂಟ, ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಮತ್ತು ಚೀನಾ ದೇಶಗಳು ಸೇರಿವೆ. ಭಾರತ ಮತ್ತು ರಷ್ಯಾ ಚಂದ್ರನ ದಕ್ಷಿಣ ಧ್ರುವದಲ್ಲಿ ಇದೇ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆ ಇಳಿಸುವ ಮಹೋನ್ನತ ಗುರಿ ಹೊಂದಿದ್ದವು. ಆದರೆ, ಈಗ ರಷ್ಯಾದ ಬಾಹ್ಯಕಾಶ ನೌಕೆ ಪತನಗೊಂಡಿದೆ. ದಕ್ಷಿಣ ಧ್ರುವವನ್ನು ತಲುಪಲು ಜು.14 ರಂದು ಉಡಾವಣೆಯಾದ ಭಾರತೀಯ ಬಾಹ್ಯಾಕಾಶ ನೌಕೆಯೊಂದಿಗೆ ಲೂನಾ 25 ಸ್ಪರ್ಧೆಯಲ್ಲಿತ್ತು.
ಇತ್ತ, ಭಾರತ ಚಂದ್ರಯಾನ-3 ನೌಕೆಯನ್ನು ಚಂದ್ರನ ತೀರಾ ಸನಿಹಕ್ಕೆ ತಂದು ನಿಲ್ಲಿಸಿದೆ. ಆಗಸ್ಟ್ 23 ರಂದು ಸಂಜೆ 6.04 ನಿಮಿಷಕ್ಕೆ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ. ಕಳೆದ ಬಾರಿಯ ಚಂದ್ರಯಾನ-2 ಉಪಗ್ರಹ ಚಂದ್ರನ ಸಾಫ್ಟ್ ಲ್ಯಾಂಡಿಂಗ್ನ ಕೊನೆ ಕ್ಷಣದಲ್ಲಿ ಪತನವಾಗಿತ್ತು. ಇದರಿಂದ ಇಸ್ರೋ ವೈಫಲ್ಯ ಆಧಾರಿತ ವಿಧಾನವನ್ನು ಇದರಲ್ಲಿ ಅಳವಡಿಸಲಾಗಿದ್ದು, ಚಂದ್ರನ ಅಂಗಳಕ್ಕೆ ಇಳಿಯುವ ಶಪಥ ಮಾಡಿದೆ.
ಲೂನಾ 25 ಬಗ್ಗೆ ಒಂದಿಷ್ಟು: ರಷ್ಯಾದ ಬಾಹ್ಯಾಕಾಶ ಸಂಸ್ಥೆ ಸೋವಿಯತ್ ಒಕ್ಕೂಟದ ಯುಗದ ಚಂದ್ರನ ಪರಿಶೋಧನಾ ಕಾರ್ಯಾಚರಣೆಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಲೂನಾ 25 ಅನ್ನು ಆ.11 ರಂದು ಪ್ರಾರಂಭಿಸಿತು. ಇದು ಆ.21 ರಂದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ನಿರ್ಧರಿಸಲಾಗಿತ್ತು. ಭಾರತದ ಚಂದ್ರಯಾನ 3 ಗಿಂತ ಮೊದಲೇ ಇದು ಚಂದ್ರನ ಮೇಲ್ಮೈ ತಲುಪುವ ಗುರಿ ಹೊಂದಿತ್ತು
ಇದನ್ನೂ ಓದಿ: ತಾಂತ್ರಿಕ ದೋಷದಿಂದ ರಷ್ಯಾ ಚಂದ್ರಯಾನ ನೌಕೆ ಪತನ: ಸಾಫ್ಟ್ ಲ್ಯಾಂಡಿಂಗ್ಗೆ ಒಂದು ದಿನ ಮೊದಲು ಕೈಕೊಟ್ಟ ನೌಕೆ