ಮಾಸ್ಕೋ, ರಷ್ಯಾ: ಉಕ್ರೇನ್ ಮೇಲೆ ಸುಮಾರು 50 ದಿನಗಳಿಂದ ಯುದ್ಧ ನಡೆಸುತ್ತಿರುವ ರಷ್ಯಾಗೆ ನ್ಯಾಟೋ (NATO-North Atlantic Treaty Organization) ಭಯ ಕಾಡುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಗುರುವಾರ ಸ್ವೀಡನ್ ಮತ್ತು ಫಿನ್‌ಲ್ಯಾಂಡ್‌ಗೆ ರಷ್ಯಾ ಎಚ್ಚರಿಕೆ ನೀಡಿದ್ದು, ಒಂದು ವೇಳೆ ಎರಡೂ ರಾಷ್ಟ್ರಗಳು ನ್ಯಾಟೋ ಸೇರಲು ಮುಂದಾದರೆ, ರಷ್ಯಾದ ಪಶ್ಚಿಮ ಭಾಗದಲ್ಲಿ (ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ಇರುವ ಪ್ರದೇಶ) ಈಗಿರುವ ಸೇನೆಗಿಂತ ಎರಡು ಪಟ್ಟು ಹೆಚ್ಚು ಸೇನೆಯನ್ನು ನಿಯೋಜನೆ ಮಾಡುವುದಾಗಿ ಹೇಳಿಕೊಂಡಿದೆ.
ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಈ ಕುರಿತು ಹೇಳಿಕೊಂಡಿದ್ದು, ರಷ್ಯಾದ ಪಶ್ಚಿಮ ಭಾಗದಲ್ಲಿ ಭೂಸೇನೆ ಮತ್ತು ವಾಯು ರಕ್ಷಣಾ ಪಡೆಗಳನ್ನು ಹೆಚ್ಚಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಸಿಎನ್‌ಎನ್ ನ್ಯೂಸ್ ವರದಿ ಮಾಡಿದೆ. ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ನ್ಯಾಟೋಗೆ ಸೇರುವ ಸಾಧ್ಯತೆಯನ್ನು ಉಲ್ಲೇಖಿಸಿ ಡಿಮಿಟ್ರಿ ಮೆಡ್ವೆಡೆವ್ ಈ ರೀತಿಯಾಗಿ ಹೇಳಿದ್ದಾರೆ.
ಡಿಮಿಟ್ರಿ ಮೆಡ್ವೆಡೆವ್ 2008ರಿಂದ 2012ರವರೆಗೆ ರಷ್ಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಈಗ ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷರಾಗಿದ್ದಾರೆ. ಉನ್ನತ ನಿರ್ಧಾರ ತೆಗೆದುಕೊಳ್ಳುವವರು ವ್ಲಾದಿಮೀರ್ ಪುಟಿನ್ ಆದರೂ ಕೂಡಾ ಇತ್ತೀಚಿನ ದಿನಗಳಲ್ಲಿ ಆಕ್ರಮಣಕಾರಿ ಮತ್ತು ಕಟ್ಟು ನಿಟ್ಟಿನ ನಿರ್ಧಾರಗಳನ್ನು ಮಡ್ವೆಡೆವ್ ತೆಗೆದುಕೊಳ್ಳುತ್ತಿದ್ದಾರೆ.
ಉಕ್ರೇನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಮೆರಿಕದ ಹಸ್ತಕ್ಷೇಪವನ್ನು ವಿರೋಧಿಸುವ ರಷ್ಯಾ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಅಮೆರಿಕದ ವಿಜ್ಞಾನಿಗಳ ಒಕ್ಕೂಟವೊಂದು ವರದಿ ಸಲ್ಲಿಸಿದ್ದು, ಪೋಲೆಂಡ್ ಮತ್ತು ಬಾಲ್ಟಿಕ್ ರಾಜ್ಯಗಳ ನಡುವಿನ ರಷ್ಯಾದ ಭೂಪ್ರದೇಶದ ಕಲಿನಿನ್‌ಗ್ರಾಡ್‌ನಲ್ಲಿ ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳ ಶೇಖರಣಾ ಬಂಕರ್ ಅನ್ನು ಆಧುನೀಕರಿಸಿರಬಹುದು ಎಂದು ತೀರ್ಮಾನಿಸಿದೆ ಎಂದು ಆ ವರದಿಯಲ್ಲಿ ಉಲ್ಲೇಖಿಸಿತ್ತು ಎಂದು ಸುದ್ದಿ ವಾಹಿನಿವೊಂದು ಮಾಡಿದೆ.
ಈಗ ಉಕ್ರೇನ್ ಮೇಲೆ ಯುದ್ಧವನ್ನು ಮುಂದುವರೆಸಿರುವ ರಷ್ಯಾ ಪೂರ್ವ ಡೊನ್‌ಬಾಸ್ ಪ್ರದೇಶದಲ್ಲಿ ಅತಿ ಹೆಚ್ಚು ಹೆಚ್ಚು ಪಡೆಗಳನ್ನು ನಿಯೋಜಿಸಿ, ದೊಡ್ಡ ಪ್ರಮಾಣದಲ್ಲಿ ಆಕ್ರಮಣ ಮಾಡಬಹುದು ಎಂದು ಉಕ್ರೇನಿಯನ್ ಅಧಿಕಾರಿಗಳು ತಮ್ಮ ಪ್ರಜೆಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಪ್ಪು ಸಮುದ್ರದಲ್ಲಿ ಮುಳುಗಿದ ರಷ್ಯಾದ ಯುದ್ಧನೌಕೆ