ಮಾಸ್ಕೋ(ರಷ್ಯಾ): ಪಾಶ್ಚಿಮಾತ್ಯ ಬೆಂಬಲಿತ ಉಕ್ರೇನ್ ವಿರುದ್ಧ ಮಾಸ್ಕೋದ ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸಲು ರಷ್ಯಾ ತನ್ನ ಮಿಲಿಟರಿ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ತನ್ನ ಪರಮಾಣು ಶಸ್ತ್ರಾಗಾರದ ಯುದ್ಧ ಸನ್ನದ್ಧತೆಯನ್ನು ಮತ್ತಷ್ಟು ಬಲಗೊಳಿಸುತ್ತದೆ. ಈ ಪ್ರಕ್ರಿಯೆ ನಿರಂತರವಾಗಿದ್ದು, ಆ ನಿಟ್ಟಿನಲ್ಲೇ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ.
ಬುಧವಾರ ರಷ್ಯಾದ ರಕ್ಷಣಾ ಸಚಿವಾಲಯದ ಮಂಡಳಿಯ ವಿಸ್ತೃತ ಸಭೆಯಲ್ಲಿ ಮಾತನಾಡಿದ ಅವರು, ಸಶಸ್ತ್ರ ಪಡೆಗಳ ಗುಣಾತ್ಮಕ ನವೀಕರಣ ಹಾಗೂ ಅವುಗಳನ್ನು ಸುಧಾರಿಸಲು ಬೇಕಾಗಿರುವ ಅಗತ್ಯ ಕ್ರಮಗಳನ್ನು ಕಾರ್ಯಗತಗೊಳಿಸುವುದು ಪ್ರಸ್ತುತ ನಮ್ಮ ಮುಂದಿರುವ ಗುರಿ. ಅದಕ್ಕೆ ಪೂರಕವಾಗಿ ಈಗಾಗಲೇ ರಷ್ಯಾ ತಯಾರಿಸಿರುವ ಹೊಸ ಕ್ಷಿಪಣಿ ಜಿರ್ಕಾನ್ ಹೈಪರ್ಸಾನಿಕ್ ಕ್ರೂಸ್ ಬಗ್ಗೆ ಉನ್ನತ ಶ್ರೇಣಿಯ ಅಧಿಕಾರಿಗಳಿಗೆ ಪುಟಿನ್ ವಿವರಿಸಿದರು.
ಹೊಸ ಕ್ಷಿಪಣಿ: ಈ ಹೊಸ ಕ್ಷಿಪಣಿಯನ್ನು ರಷ್ಯಾದ ಪಡೆಗಳು ಜನವರಿಯಲ್ಲಿ ಬಳಸಲು ಸಾಧ್ಯವಾಗುತ್ತದೆ. ಜನವರಿ ಆರಂಭದಲ್ಲಿ ಹೊಸ ಕ್ಷಿಪಣಿಯನ್ನು ಅಡ್ಮಿರಲ್ ಗೋರ್ಶ್ಕೋವ್ ಯುದ್ಧನೌಕೆಗೆ ಅಳವಡಿಸಲಾಗುತ್ತದೆ. ಈ ಕ್ಷಿಪಣಿ ಸಾಮರ್ಥ್ಯಕ್ಕೆ ಸಮನಾದ ಕ್ಷಿಪಣಿ ಪ್ರಪಂಚದ ಯಾವು ದೇಶದಲ್ಲಿಯೂ ಇಲ್ಲ. ನಮ್ಮಲ್ಲಿರುವ ಆಧುನಿಕ ಪರಮಾಣು ಶಸ್ತ್ರಾಸ್ತ್ರಗಳ ಮಟ್ಟ ಶೇ 91 ನ್ನು ಮೀರಿದ್ದು, ನಮ್ಮಲ್ಲಿರುವ ಎಲ್ಲಾ ರೀತಿಯ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳ ಸಹಾಯದೊಂದಿಗೆ ನಾವು ಉಕ್ರೇನ್ ವಿರುದ್ಧ ಹಾಕಿಕೊಂಡಿರುವ ಎಲ್ಲಾ ಯೋಜನೆಗಳನ್ನು ಸಾಧಿಸಿಕೊಳ್ಳುತ್ತೇವೆ ಎಂದು ಅಧಿಕಾರಿಗಳಿಗೆ ವಿಶ್ವಾಸ ತುಂಬಿದರು.
ಶಸ್ತ್ರಾಸ್ತ್ರ ಹೆಚ್ಚಳಕ್ಕೆ ಸೂಚನೆ: ನಮ್ಮ ಗುರಿಯನ್ನು ನಾವು ತಲುಪಬೇಕಾದರೆ ಯುದ್ಧ ಭೂಮಿಯಲ್ಲಿ ಅದರಲ್ಲೂ ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗಳಿಂದ ಆವೃತವಾಗಿರುವ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಫೈಟರ್‌ಗಳು ಮತ್ತು ಬಾಂಬರ್‌ಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಪುಟಿನ್ ಸೂಚಿಸಿದರು.
ಸಭೆಯಲ್ಲಿ ವರದಿಯೊಂದನ್ನು ಪ್ರಸ್ತುತಪಡಿಸಿದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ರಷ್ಯಾದ ಸಶಸ್ತ್ರ ಪಡೆಗಳ ಸಂಖ್ಯೆಯನ್ನು 695,000 ಗುತ್ತಿಗೆ ಸೈನಿಕರು ಸೇರಿದಂತೆ 1.5 ಮಿಲಿಯನ್ ಸೈನಿಕರ ಸಂಖ್ಯೆಗೆ ಹೆಚ್ಚಿಸಲು ಪ್ರಸ್ತಾಪಿಸಿದರು. ಯಾಕೆಂದರೆ ಸದ್ಯ ಉಕ್ರೇನ್‌ನಲ್ಲಿ ಪಶ್ಚಿಮ ದೇಶಗಳ ಸಂಯೋಜಿತ ಪಡೆಗಳೊಂದಿಗೆ ಹೋರಾಡುತ್ತಿರುವ ರಷ್ಯಾದ ಸೈನಿಕರಿಗೆ, ಇಷ್ಟು ಸೈನಿಕರಿರುವ ಸಶಸ್ತ್ರ ಪಡೆಗಳ ಅಗತ್ಯವಿದೆ.
ಈಗಾಗಲೇ ಯುದ್ಧದಲ್ಲಿ ರಷ್ಯಾ ಪಡೆಗಳು ಉಕ್ರೇನ್ನ ಎರಡು ಬಂದರು ನಗರಗಳನ್ನು ವಶಪಡಿಸಿಕೊಂಡಿದ್ದು, ಅವುಗಳನ್ನು ಅಜೋವ್ ಸಮುದ್ರದಲ್ಲಿ ಬಳಸಲು ಮಾಸ್ಕೋ ಯೋಜಿಸಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಅಮೆರಿಕಾದ ಏರ್ ಡಿಫೆನ್ಸ್ ಸಿಸ್ಟಮ್ಸ್ ಬಳಸದಂತೆ ಉಕ್ರೇನ್ಗೆ ಎಚ್ಚರಿಕೆ ನೀಡಿದ ರಷ್ಯಾ!