ಲಂಡನ್: ನಾಡಿದ್ದು ಬ್ರಿಟನ್ ಎರಡನೇ ಎಲಿಜಬೆತ್ ರಾಣಿಯ ಅಂತ್ಯಕ್ರಿಯೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂತಿಮ ವಿದಾಯದ ವೇಳೆ ಭದ್ರತೆಗಾಗಿ ಸರ್ಕಾರ ಖರ್ಚು ಮಾಡುತ್ತಿರುವ ಮೊತ್ತ ಕೇಳಿದರೆ ಬೆರಗಾಗುತ್ತದೆ. ಎಷ್ಟು ಅಂತೀರಾ.. 7.5 ಮಿಲಿಯನ್ ಅಮೆರಿಕನ್ ಡಾಲರ್, ಅಂದರೆ ಭಾರತೀಯ ರೂಪಾಯಿಯಲ್ಲಿ 59 ಕೋಟಿ ರೂಪಾಯಿ.
ನಿಜ, ಸೆಪ್ಟೆಂಬರ್ 19 ರಂದು ರಾಣಿಯ ಅಂತ್ಯಕ್ರಿಯೆಯ ಭದ್ರತೆಗಾಗಿ ಬ್ರಿಟನ್ ಸರ್ಕಾರ ವ್ಯಯ ಮಾಡುತ್ತಿರುವ ಭದ್ರತಾ ಅಂದಾಜು ವೆಚ್ಚ. ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯನ್ನು ದೇಶದ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಮತ್ತು ಒಂದು ದಿನದ ಕಾರ್ಯಕ್ರಮವಾಗಿದೆ.
ಅಂತ್ಯಕ್ರಿಯೆಯ ವೇಳೆ ಬೃಹತ್ ಸಂಖ್ಯೆಯಲ್ಲಿ ವಿದೇಶಿ ನಾಯಕರು ಮತ್ತು ಜನರು ಸೇರುವ ಸಾಧ್ಯತೆ ಇದ್ದು, ರಕ್ಷಣೆಗಾಗಿ ಬ್ರಿಟಿಷ್ ಸರ್ಕಾರ ಎಂಐ5, ಎಂಐ6 ಗುಪ್ತಚರ ಸಂಸ್ಥೆಗಳು, ಲಂಡನ್‌ನ ಮೆಟ್ರೋಪಾಲಿಟನ್ ಪೊಲೀಸ್ ಮತ್ತು ರಹಸ್ಯ ಸೇವೆಯ ಅಧಿಕಾರಿ, ಸಿಬ್ಬಂದಿಯನ್ನು ಬಳಸಲಾಗುತ್ತಿದೆ.
ಯುನೈಟೆಡ್ ಕಿಂಗ್‌ಡಮ್ ಪೊಲೀಸ್ ಇದುವರೆಗೆ ಕೈಗೊಳ್ಳುತ್ತಿರುವ ಅತಿದೊಡ್ಡ ಭದ್ರತಾ ಕಾರ್ಯಕ್ರಮ ಮತ್ತು ವೆಚ್ಚದಾಯಕವೂ ಇದಾಗಿದೆ. ಈವರೆಗೂ ಇಂತಹ ಬೃಹತ್ತಾದ ರಕ್ಷಣೆಯನ್ನು ಏಕದಿನದಲ್ಲಿ ನೀಡಲಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಈ ಹಿಂದೆ 2011 ರಲ್ಲಿ ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಅವರ ವಿವಾಹ ಕಾರ್ಯಕ್ರಮಕ್ಕೆ 7.2 ಮಿಲಿಯನ್ ಡಾಲರ್ ವ್ಯಯಿಸಿ ಭದ್ರತೆ ನೀಡಲಾಗಿತ್ತು. ಅದೇ ಈವರೆಗೂ ಇದ್ದ ವೆಚ್ಚದಾಯಕ ಭದ್ರತಾ ಕಾರ್ಯಕ್ರಮವಾಗಿತ್ತು.
ರಾಣಿ ವಿದಾಯಕ್ಕೆ 7 ಲಕ್ಷ ಜನರು ಭಾಗಿ: ಇನ್ನು ರಾಣಿಯ ಅಂತಿಮ ಯಾತ್ರೆಯಲ್ಲಿ 7.50 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದು ಇಡೀ ಲಂಡನ್ ನಗರವನ್ನೇ ಆವರಿಸಲಿದೆ. ಇಷ್ಟು ಪ್ರಮಾಣದ ಜನರಿಗೆ ಭದ್ರತೆ ನೀಡುವುದು ನಿಜಕ್ಕೂ ಸವಾಲಾಗಲಿದೆ. ಅಂತ್ಯಕ್ರಿಯೆಗೆ ಬರುವ ಎಲ್ಲ ವಿದೇಶಿ ಗಣ್ಯರು ಲಂಡನ್ಗೆ ಬರಲು ಖಾಸಗಿ ವಿಮಾನ ಬಳಸಿದರೆ, ಇಲ್ಲಿಗೆ ಬಂದ ಮೇಲೆ ಅಂತ್ಯಕ್ರಿಯೆ ಸ್ಥಳಕ್ಕೆ ಆಗಮಿಸಲು ವಿಮಾನ ಬಳಕೆ ಮಾಡದಂತೆ ಅರಮನೆ ಕೋರಿದೆ. ಇದಕ್ಕಾಗಿ ವಿಶೇಷ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ.
ಭಾರತದ ಪರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದು, ಸಂತಾಪ ಸೂಚಿಸಲಿದ್ದಾರೆ. ಈಗಾಗಲೇ ಅವರು ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದ್ದಾರೆ.
ಓದಿ: ನಾಡಿದ್ದು ಬ್ರಿಟನ್ ರಾಣಿ ಅಂತ್ಯಕ್ರಿಯೆ.. ಇಂಗ್ಲೆಂಡ್ಗೆ ತೆರಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು