ಮಾಸ್ಕೋ (ರಷ್ಯಾ): ಪ್ರಮುಖ ಸೇನಾ ನಾಯಕನನ್ನು ಉಕ್ರೇನ್ ಬಾಂಬ್ ಹಾಕಿ ಉಡಾಯಿಸಿದ ಬಳಿಕ ಕೆರಳಿರುವ ರಷ್ಯಾ, ಉಕ್ರೇನ್ ಮೇಲೆ ಯುದ್ಧ ತೀವ್ರಗೊಳಿಸಲು ಏನು ಮಾಡಬಾರದಿತ್ತೋ ಅದನ್ನು ಮಾಡಲು ಹೊರಟಿದೆ. ಸರ್ವನಾಶವನ್ನೇ ಸೃಷ್ಟಿಸುವ ಪರಮಾಣು ಬಾಂಬ್‌ಗಳನ್ನು ತನ್ನ ಗಡಿಯಲ್ಲಿರುವ ಮಿತ್ರರಾಷ್ಟ್ರವಾದ ಬೆಲಾರಸ್‌ಗೆ ಕಳುಹಿಸಿಕೊಟ್ಟಿದೆ. ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಸ್ವತಃ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾಹಿತಿ ನೀಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಮಾಸ್ಕೋದಿಂದ ಮೊದಲ ಬ್ಯಾಚ್ ಪರಮಾಣು ಶಸ್ತ್ರಾಸ್ತ್ರಗಳನ್ನು ಬೆಲಾರಸ್‌ಗೆ ಕಳುಹಿಸಲಾಗಿದೆ. ಬೇಸಿಗೆಯ ಅಂತ್ಯದ ವೇಳೆಗೆ ಉಳಿದ ಪರಮಾಣು ಬಾಂಬ್‌ಗಳನ್ನು ಗಡಿಗೆ ತಲುಪಿಸಬೇಕು ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾಗಿ ವರದಿಯಾಗಿದೆ.
ಯುದ್ಧದಲ್ಲಿ ಯಾವುದೇ ಕಾರಣಕ್ಕೂ ಪರಮಾಣುಗಳ ಬಳಕೆ ಮಾಡದಂತೆ ವಿಶ್ವವೇ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಇತ್ತ ರಷ್ಯಾ ನಿರ್ಬಂಧಗಳನ್ನೆಲ್ಲಾ ಗಾಳಿಗೆ ತೂರಿ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಗಡಿಯಲ್ಲಿ ಸಜ್ಜು ಮಾಡುತ್ತಿದೆ. ಸೇಂಟ್ ಪೀಟರ್ಸ್‌ಬರ್ಗ್ ಇಂಟರ್‌ನ್ಯಾಶನಲ್ ಎಕನಾಮಿಕ್ ಫೋರಮ್ ಅನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, ಬೆಲಾರಸ್‌ಗೆ ಮೊದಲು ಸುತ್ತಿನ ಪರಮಾಣು ಬಾಂಬ್‌ಗಳನ್ನು ಕಳುಹಿಸಿಕೊಡಲಾಗಿದೆ. ಬೇಸಿಗೆ ಮುಗಿಯುವ ವೇಳೆಗೆ ಇನ್ನಷ್ಟು ಶಸ್ತ್ರಾಸ್ತ್ರಗಳನ್ನು ಅಲ್ಲಿಗೆ ತಲುಪಲಿವೆ ಎಂದು ಹೇಳಿದ್ದಾರೆ.
ಉಕ್ರೇನ್ ಗಡಿಯಲ್ಲಿರುವ ಯುದ್ಧತಂತ್ರದ ಭಾಗವಾಗಿ ಪರಮಾಣು ಬಾಂಬ್‌ಗಳನ್ನು ನಿಯೋಜಿಸುವ ಯೋಜನೆ ಇದಾಗಿದೆ. ಇದಕ್ಕಾಗಿ ರಷ್ಯಾ ಶಸ್ತ್ರಾಸ್ತ್ರಗಳನ್ನ ಕ್ರೋಢೀಕರಿಸುತ್ತಿದೆ. ಇದು ತನ್ನೆಲ್ಲ ಎದುರಾಳಿಗಳಿಗೆ ನೇರ ಸಂದೇಶ ರವಾನಿಸಿದೆ. ರಷ್ಯಾ ಮತ್ತು ಅದರ ಕಾರ್ಯತಂತ್ರದ ಸೋಲಿನ ಬಗ್ಗೆ ಯೋಚಿಸುವ ವಿರೋಧಿಗಳೆಲ್ಲರಿಗೂ ಇದು ಎಚ್ಚರಿಕೆಯ ಗಂಟೆ ಎಂದು ಪುಟಿನ್ ಹೇಳಿದ್ದಾರೆ.
ರಷ್ಯಾದ ಅಸ್ತಿತ್ವ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಲೂ ದೇಶ ಸಿದ್ಧವಿದೆ. ದೇಶದ ರಾಜ್ಯತ್ವಕ್ಕೆ ಬೆದರಿಕೆಯಿದ್ದರೆ ತೀವ್ರತರವಾದ ಯಾವುದೇ ಹಾದಿಯನ್ನೂ ಬಳಸಲಾಗುತ್ತದೆ. ನಾವು ಖಂಡಿತವಾಗಿಯೂ ಎಲ್ಲಾ ಪಡೆಗಳನ್ನು ಬಳಸುತ್ತೇವೆ. ರಷ್ಯಾದ ತನಗಾಗಿ ಏನು ಬೇಕಾದರೂ ಮಾಡಲು ಸಜ್ಜಾಗಿರುತ್ತದೆ ಎಂದು ಪುಟಿನ್ ಗುಡುಗಿದ್ದಾರೆ.
ಪುಟಿನ್ ಹೇಳಿಕೆಯ ಬೆನ್ನಲ್ಲೇ, ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರೂ "ರಷ್ಯಾದಿಂದ ಪರಮಾಣು ಬಾಂಬ್‌ಗಳು ಮತ್ತು ಕ್ಷಿಪಣಿಗಳ" ಮೊದಲ ಕಂತನ್ನು ಸ್ವೀಕರಿಸಲಾಗಿದೆ. ಇವುಗಳು ಎರಡನೇ ವಿಶ್ವ ಯುದ್ಧದಲ್ಲಿ ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಬಳಸಿದ ಬಾಂಬ್ಗಳಿಗಿಂತ ಮೂರು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿವೆ ಎಂದು ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ಕಳೆದೊಂದು ವರ್ಷದಿಂದ ಉಕ್ರೇನ್‌ನ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣದ ಬಳಿಕ ಇದೇ ಮೊದಲ ಬಾರಿಗೆ ಪರಮಾಣು ಸಿಡಿತಲೆಗಳನ್ನು ರವಾನಿಸಲಾಗಿದೆ. ಉಕ್ರೇನಿಯನ್ ಪಡೆಗಳು ರಷ್ಯಾದ ವಿರುದ್ಧ ದೊಡ್ಡ ಪ್ರಮಾಣದ ಪ್ರತಿದಾಳಿಯನ್ನು ಪ್ರಾರಂಭಿಸಿದ ಒಂದು ವಾರದ ನಂತರ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಲಾಗಿದೆ. ಇವು ಸದ್ಯಕ್ಕೆ ರಷ್ಯಾ ಬಳಕೆ ಮಾಡುವುದಿಲ್ಲವಾದರೂ, ಯಾವುದೇ ಹಂತದಲ್ಲೂ ಅವು ಸಿಡಿಯಬಹುದು ಎಂಬ ಮಾತನ್ನು ಬೆಲಾರಸ್ ಅಧ್ಯಕ್ಷರು ಹೇಳಿದ್ದಾರೆ.
ನ್ಯಾಟೋ ಸೇರಿದ ಫಿನ್‌ಲ್ಯಾಂಡ್: ಇದೇ ವೇಳೆ ವರ್ಷ ಏಪ್ರಿಲ್ 4 ರಂದು ಬ್ರಸೆಲ್ಸ್‌ನಲ್ಲಿರುವ NATO ಪ್ರಧಾನ ಕಚೇರಿಯಲ್ಲಿ ಅಮೆರಿಕದೊಂದಿಗೆ ಉತ್ತರ ಅಟ್ಲಾಂಟಿಕ್ ಒಪ್ಪಂದ ಮಾಡಿಕೊಂಡ ಬಳಿಕ ಫಿನ್‌ಲ್ಯಾಂಡ್ ನ್ಯಾಟೋ ಪಡೆಯ ಹೊಸ ಸದಸ್ಯ ರಾಷ್ಟ್ರವಾಗಿ ಸೇರಿಕೊಂಡಿತು. ಫಿನ್‌ಲ್ಯಾಂಡ್ ವಿದೇಶಾಂಗ ಸಚಿವ ಪ್ರವೇಶ ದಾಖಲೆಗೆ ಸಹಿ ಹಾಕಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ಗೆ ನೀಡಿದರು. ಎಲ್ಲಾ ಪ್ರಕ್ರಿಯೆಗಳು ಮುಗಿದ ತಕ್ಷಣ ಫಿನ್‌ಲ್ಯಾಂಡ್ ದೇಶದ ಧ್ವಜವು ನ್ಯಾಟೋ ಪ್ರಧಾನ ಕಚೇರಿಯಲ್ಲಿ ಹಾರಾಡಲಿದೆ.
ರಷ್ಯಾ ಕಿಡಿ: ನ್ಯಾಟೋ ವಿಸ್ತರಣೆಯು ನಮ್ಮ ಭದ್ರತೆ ಮತ್ತು ರಷ್ಯಾದ ರಾಷ್ಟ್ರೀಯ ಹಿತಾಸಕ್ತಿಗಳ ಮೇಲಿನ ದಾಳಿಯಾಗಿದೆ ಎಂದು ರಷ್ಯಾ ಹೇಳಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಗುಜರಾತಲ್ಲಿ ಅಬ್ಬರಿಸಿ ಬೊಬ್ಬಿರಿದ 'ಬಿಪರ್ಜೋಯ್' ಶಾಂತ... ಚಂಡಮಾರುತ ದುರ್ಬಲ.. ರಾಜಸ್ಥಾನದಲ್ಲಿ ಧಾರಾಕಾರ ಮಳೆ