ಕೊಲಂಬೊ(ಶ್ರೀಲಂಕಾ): ಕಳೆದ ಕೆಲ ದಿನಗಳಿಂದ ಶ್ರೀಲಂಕಾದಲ್ಲಿ ಉದ್ಭವವಾಗಿದ್ದ ಆರ್ಥಿಕ ಬಿಕ್ಕಟ್ಟು ಪರಿಸ್ಥಿತಿ ಇದೀಗ ಮತ್ತೊಂದು ಹಂತ ತಲುಪಿದ್ದು, ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಹಿಂಸಾಚಾರ ಮತ್ತಷ್ಟು ಭುಗಿಲೆದ್ದಿದ್ದು, ಆಡಳಿತರೂಢ ಪಕ್ಷದ ಸಂಸದನೋರ್ವ ಶವವಾಗಿ ಪತ್ತೆಯಾಗಿದ್ದಾರೆ.
ಮಹಿಂದಾ ರಾಜಪಕ್ಸೆ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಂತೆ ಪ್ರತಿಭಟನಾಕಾರರು ಸಂಸದನ ಕಾರು ಸುತ್ತುವರೆದಿದ್ದಾರೆ. ಈ ವೇಳೆ ಗುಂಡು ಹಾರಿಸಿದ್ದು, ಇಬ್ಬರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಸ್ಥಳೀಯ ಕಟ್ಟಡವೊಂದರಲ್ಲಿ ಹೋಗಿ ಅವಿತುಕೊಂಡಿದ್ದಾರೆ.
ಸಂಸದರು ಅವಿತುಕೊಂಡಿದ್ದ ಸ್ಥಳಕ್ಕೆ ಸಾವಿರಾರು ಪ್ರತಿಭಟನಾಕಾರರು ಲಗ್ಗೆ ಹಾಕುತ್ತಿದ್ದಂತೆ ಅವರು ಗುಂಡು ಹಾರಿಸಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆಂದು ಹೇಳಲಾಗ್ತಿದೆ. ಈಗಾಗಲೇ ಅವರ ಮೃತದೇಹ ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಶ್ರೀಲಂಕಾದ ನಿಟ್ಟಂಬುವಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಂಸದ ಅಮರಕೀರ್ತಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ರಾಜೀನಾಮೆ, ಭುಗಿಲೆದ್ದ ಹಿಂಸಾಚಾರ
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಿರುವ ಕಾರಣ ಅಗತ್ಯ ವಸ್ತುಗಳ ಬೆಲೆಯಲ್ಲಿ ಗಣನೀಯವಾದ ಏರಿಕೆ ಕಂಡು ಬಂದಿದೆ. ಇದೇ ವಿಷಯವಾಗಿ ಸರ್ಕಾರದ ವಿರುದ್ಧ ಸಾವಿರಾರು ಜನರು ರಸ್ತೆಗೆ ಇಳಿದು ಹೋರಾಟ ನಡೆಸುತ್ತಿದ್ದಾರೆ. ಪ್ರಧಾನಿ ಹುದ್ದೆಗೆ ರಾಜಪಕ್ಸೆ ರಾಜೀನಾಮೆ ನೀಡುತ್ತಿದ್ದಂತೆ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಸೇನೆ ನಿಯೋಜನೆ ಮಾಡಲಾಗಿದೆ. ಇದರ ಮಧ್ಯೆ ಕೂಡ, ಸಾವಿರಾರು ಜನರು ರಸ್ತೆಗೆ ಇಳಿದು, ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಸದ, ಮಾಜಿ ಸಚಿವರ ಮನೆಗೆ ಬೆಂಕಿ: ಹಿಂಸಾಚಾರದ ವೇಳೆ ಶ್ರೀಲಂಕಾದ ಸಂಸದ ಮತ್ತು ಮಾಜಿ ಸಚಿವರ ನಿವಾಸಕ್ಕೆ ಬೆಂಕಿ ಹಚ್ಚಲಾಗಿದೆ. ಮಾಜಿ ಸಚಿವ ಜಾನ್ಸನ್ ಫರ್ನಾಂಡೋ ಅವರ ಮೌಂಟ್ ಲ್ಯಾವಿನಿಯಾ ನಿವಾಸ ಹಾಗೂ ಸಂಸದ ಸನತ್ ನಿಶಾಂತ್ ಅವರ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.