ಕರಾಚಿ( ಪಾಕಿಸ್ತಾನ): ದೇಶದ ಅತ್ಯಂತ ಜನನಿಬಿಡ ನಗರ ಕರಾಚಿ ಪೊಲೀಸ್ ಮುಖ್ಯಸ್ಥರ ಕಚೇರಿ ಮೇಲೆ ಭಾರಿ ಶಸ್ತ್ರಸಜ್ಜಿತ ಪಾಕಿಸ್ತಾನಿ ತಾಲಿಬಾನ್ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಬಂಡುಕೋರರು ಮತ್ತು ಇತರ ನಾಲ್ವರು ಸಾವನ್ನಪ್ಪಿದ್ದಾರೆ. ಭದ್ರತಾ ಪಡೆಗಳ ಮೇಲೆ ಪಾಕಿಸ್ತಾನದಲ್ಲಿ ನಡೆದ ಇತ್ತೀಚಿನ ಭೀಕರ ದಾಳಿ ಇದಾಗಿದೆ. ಪಾಕಿಸ್ತಾನದ ಸ್ಥಳೀಯ ಕಾಲಮಾನ ರಾತ್ರಿ 7:10ರ ಸುಮಾರಿಗೆ ಈ ದಾಳಿ ನಡೆದಿದೆ.
ಕರಾಚಿ ಪೊಲೀಸ್ ಮುಖ್ಯಸ್ಥರ ಮುಖ್ಯ ಕಚೇರಿಯ ಮೇಲೆ ದಾಳಿ ನಡೆದಿರುವುದನ್ನು ಕರಾಚಿ ಪೊಲೀಸ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಕರಾಚಿ ಪೊಲೀಸ್ ಮುಖ್ಯಸ್ಥ ಜಾವೇದ್ ಓಧೋ ಸಹ ತಮ್ಮ ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂದು ಟ್ವೀಟ್‌ನಲ್ಲಿ ದೃಢಪಡಿಸಿದ್ದಾರೆ. ಪೊಲೀಸ್ ಪಡೆಗಳು ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆಯ ನಂತರ ನಗರದ ಪೊಲೀಸ್ ಮುಖ್ಯಸ್ಥರ ಐದು ಅಂತಸ್ತಿನ ಕಚೇರಿಯನ್ನು ಸಂಪೂರ್ಣವಾಗಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿವೆ.
ಭಯೋತ್ಪಾದಕರನ್ನು ತಟಸ್ಥಗೊಳಿಸುವಲ್ಲಿ ಕರಾಚಿ ಪೊಲೀಸ್ ಪಡೆಗಳು ಯಶಸ್ವಿಯಾಗಿವೆ. ಆದರೆ ಈ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಾವೇದ್ ಓಧೋ ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ತಿಳಿಸಿದ್ದಾರೆ. ಇನ್ನು ಉಗ್ರರ ದಾಳಿಯಲ್ಲಿ ರೇಂಜರ್ಸ್ ಸಿಬ್ಬಂದಿ ಸೇರಿದಂತೆ 14 ಮಂದಿ ಗಾಯಗೊಂಡಿದ್ದಾರೆ. ಕಟ್ಟಡದಲ್ಲಿ ಎಂಟು ಉಗ್ರರು ಇದ್ದರು ಎಂದು ಪೊಲೀಸ್ ಮೂಲಗಳು ಮೊದಲು ತಿಳಿಸಿದ್ದವು.
ಹಿರಿಯ ಪೊಲೀಸ್ ಅಧಿಕಾರಿ, ದಕ್ಷಿಣ ಡಿಐಜಿ ಇರ್ಫಾನ್ ಬಲೂಚ್ ಈ ಬಗ್ಗೆ ಮಾತನಾಡಿ, ಉಗ್ರರು ಕಟ್ಟಡದ ಹಿಂಭಾಗದಿಂದ ಪ್ರವೇಶಿಸಿದರೆ ಇಬ್ಬರು ಪೊಲೀಸ್ ಸಮವಸ್ತ್ರವನ್ನು ಧರಿಸಿ ಮುಖ್ಯ ಗೇಟ್‌ನಿಂದ ಪ್ರವೇಶಿಸಿದ್ದರು ಎಂದು ತಿಳಿಸಿದ್ದಾರೆ. ಇಂದು 7.10 ರ ಸುಮಾರಿಗೆ ಭಯೋತ್ಪಾದಕರಿದ್ದ ಎರಡು ಕಾರುಗಳು ಕಟ್ಟಡದ ಹಿಂಭಾಗದ ಪ್ರವೇಶದ್ವಾರದಲ್ಲಿ ಮತ್ತು ಮುಂಭಾಗದಲ್ಲಿ ಒಂದು ಬಾಗಿಲು ತೆರೆದಿರುವುದನ್ನು ನಾವು ಕಂಡುಕೊಂಡಿದ್ದೇವೆ. ಬಾಂಬ್ ನಿಷ್ಕ್ರಿಯ ದಳವು ಎರಡೂ ಕಾರುಗಳನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿವೆ. ಅದರಲ್ಲಿ ಸ್ಫೋಟಕ ಸಾಧನಗಳು, ಭಯೋತ್ಪಾದಕರ ಆತ್ಮಹತ್ಯಾ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದರು. ಈ ಮಧ್ಯೆ ದಾಳಿಯ ಹೊಣೆಯನ್ನು ಪಾಕಿಸ್ತಾನದ ತಾಲಿಬಾನ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದೆ.
ತಮ್ಮನ್ನು ತಾನೇ ಸ್ಫೋಟಿಸಿಕೊಂಡ ಉಗ್ರರು: ಗುಂಡಿನ ಚಕಮಕಿಯ ವೇಳೆ ಇಬ್ಬರು ಭಯೋತ್ಪಾದಕರು ಕಟ್ಟಡದ ಮೇಲ್ಛಾವಣಿಯ ಮೇಲೆ ತಮ್ಮನ್ನು ತಾವು ಸ್ಫೋಟಿಸಿಕೊಂಡರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮಧ್ಯೆ ಅವರ ಗುರುತಿನ ಪ್ರಕ್ರಿಯೆ ನಡೆಸಲಾಗುತ್ತಿದೆ. ಎಷ್ಟು ಭಯೋತ್ಪಾದಕರು ಕಟ್ಟಡದ ಮೇಲೆ ಏರಿ ದಾಳಿ ಮಾಡಿದರು ಮತ್ತು ಕೊಲ್ಲಲ್ಪಟ್ಟರು ಅಥವಾ ಬಂಧಿಸಲ್ಪಟ್ಟಿದ್ದಾರೆ ಎಂಬುದನ್ನು ನಿಖರವಾಗಿ ಹೇಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ
ಅರ್ಧ ಡಜನ್ ಹ್ಯಾಂಡ್ ಗ್ರೆನೇಡ್‌ಗಳನ್ನು ಕರಾಚಿ ಪೊಲೀಸ್ ಮುಖ್ಯಸ್ಥರ ಕಚೇರಿ ಕಟ್ಟಡದ ಮುಖ್ಯ ಕಾಂಪೌಂಡ್‌ಗೆ ಎಸೆದ ಭಯೋತ್ಪಾದಕರು ನಂತರ ಆವರಣವನ್ನು ಪ್ರವೇಶಿಸಿದ್ದರು. ಈ ವೇಳೆ, ಅರೆಸೇನಾ ಪಡೆಗಳು, ಪೊಲೀಸರು ಮತ್ತು ದಾಳಿಕೋರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ದಾಳಿಕೋರರನ್ನು ಸುತ್ತುವರಿಯಲು ಜಿಲ್ಲಾ ಮತ್ತು ಸುತ್ತಮುತ್ತಲಿನ ಪ್ರದೇಶದ ಎಲ್ಲ ಮೊಬೈಲ್ ವ್ಯಾನ್‌ಗಳನ್ನು ತುರ್ತಾಗಿ ಸ್ಥಳಕ್ಕೆ ಕರೆಸಲಾಗಿತ್ತು ಎಂದು ಪೊಲೀಸ್ ಮೂಲವೊಂದು ಮೊದಲು ತಿಳಿಸಿತ್ತು.
ಜನನಿಬಿಡ ಪ್ರದೇಶ: ದಾಳಿ ನಡೆದ ಪೊಲೀಸ್ ಮುಖ್ಯ ಕಚೇರಿ ಹತ್ತಿರದಲ್ಲಿ ಅನೇಕ ಪಂಚತಾರಾ ಹೋಟೆಲ್‌ಗಳಿವೆ. ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಸ್ಪರ್ಧಿಸುತ್ತಿರುವ ಸಾಗರೋತ್ತರ ಕ್ರಿಕೆಟ್ ಆಟಗಾರರು ಈ ಹೋಟೆಲ್‌ಗಳಲ್ಲಿ ತಂಗಿದ್ದಾರೆ. ಭಯೋತ್ಪಾದಕ ದಾಳಿ ನಡೆದ ತಕ್ಷಣ ತಂಡದ ಹೋಟೆಲ್‌ಗಳು ಮತ್ತು ಪಂದ್ಯಗಳು ನಡೆಯುವ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿ: ಮಿಸ್ಸಿಸ್ಸಿಪ್ಪಿ ಶೂಟೌಟ್: 6 ಮಂದಿ ಬಲಿ, ಶಂಕಿತ ಪೊಲೀಸ್ ವಶಕ್ಕೆ