ಲಾಹೋರ್ (ಪಾಕಿಸ್ತಾನ): ಜೈಲಿನಲ್ಲಿರುವ ಇಮ್ರಾನ್ ಖಾನ್ ಪಕ್ಷವು ತಮ್ಮ ಶಕ್ತಿಯನ್ನು ಪ್ರದರ್ಶಿಸಲು ವರ್ಚುವಲ್ ಸಭೆಯನ್ನು ಆಯೋಜಿಸಿತ್ತು. ಆದರೆ ಅದಕ್ಕೂ ಮೊದಲು X, Facebook, Instagram ಮತ್ತು YouTube ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳು ನಿಧಾನಗತಿಯಲ್ಲಿ ಚಲಿಸುತ್ತಿದ್ದರಿಂದ ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಭಾನುವಾರ ರಾತ್ರಿ 9 ಗಂಟೆಗೆ ಸಭೆ ಆರಂಭವಾಯಿತು. ಲಾಹೋರ್, ಕರಾಚಿ ಮತ್ತು ಇಸ್ಲಾಮಾಬಾದ್‌ನಲ್ಲಿ, ಬಳಕೆದಾರರು ರಾತ್ರಿ 8 ರಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಡಚಣೆಯ ಬಗ್ಗೆ ದೂರು ನೀಡಲು ಪ್ರಾರಂಭಿಸಿದರು. ಹೆಚ್ಚಿನ ಸಂಖ್ಯೆಯ ಬಳಕೆದಾರರು ಸಾಮಾಜಿಕ ಮಾಧ್ಯಮ ಸೈಟ್‌ಗಳನ್ನು ಪ್ರವೇಶಿಸುವಲ್ಲಿನ ತೊಂದರೆಗಳ ಬಗ್ಗೆ ದೂರು ನೀಡಿದ್ದರಿಂದ ಭಾನುವಾರ ರಾತ್ರಿ ದೇಶದಾದ್ಯಂತ ಇಂಟರ್ನೆಟ್ ಸೇವೆಗಳು ಅಡೆತಡೆಗಳನ್ನು ಎದುರಿಸಿದ್ದವು ಎಂಬುದರ ಬಗ್ಗೆ ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.
ಅಪ್ಲಿಕೇಶನ್‌ಗಳು, ವಿಶೇಷವಾಗಿ ವೆಬ್‌ಸೈಟ್ ಆವೃತ್ತಿಗಳು ಸುಮಾರು 8 ಗಂಟೆಯಿಂದ ಸ್ಥಗಿತಗೊಂಡಿವೆ. ಸ್ಥಳೀಯ ಸಮಯ ಉಲ್ಲೇಖಿಸಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕರಾಚಿ, ಲಾಹೋರ್, ಮೀರ್ ಪುರ್ ಖಾಸ್ ಮತ್ತು ರಾವಲ್ಪಿಂಡಿ ನಗರಗಳು ದೇಶದ ಅತಿ ಹೆಚ್ಚು ಇಂಟರ್ನೆಟ್ ಸ್ಥಗಿತದ ತೊಂದರೆ ಅನುಭವಿಸಿದ ನಗರಗಳಾಗಿವೆ. ಕೆಲವು ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಲು WhatsApp ಅನ್ನು ಬಳಸಿಕೊಂಡಿದ್ದಾರೆ.
ಪಾಕಿಸ್ತಾನ ಟೆಲಿಕಮ್ಯುನಿಕೇಶನ್ ಅಥಾರಿಟಿ (ಪಿಟಿಎ) ಈ ವಿಷಯದ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡದ ಕಾರಣ ಸ್ಥಗಿತದ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ವರದಿಯಾಗಿದೆ.
ಕಾಶ್ಮೀರ ಸಮಸ್ಯೆ ಇನ್ನಷ್ಟು ಜಟಿಲ- ಇಮ್ರಾನ್: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿ ರದ್ದತಿ ಅಮಾನ್ಯ ಮಾಡಿರುವ ಕೇಂದ್ರ ಸರ್ಕಾರದ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪ್ರತಿಕ್ರಿಯಿಸಿದ್ದರು. ಕಾಶ್ಮೀರ ಸಮಸ್ಯೆ ಮತ್ತಷ್ಟು ಜಟಿಲವಾಗಲಿದೆ ಎಂದು ಹೇಳಿದ್ದರು.
ಸದ್ಯ ಪ್ರಕರಣವೊಂದರಲ್ಲಿ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಬಂಧಿಯಾಗಿರುವ ಖಾನ್, ತಮ್ಮ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ನ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. 370 ನೇ ವಿಧಿಯನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದು, ಈಗಿನ ಸಮಸ್ಯೆಗೆ ಪರಿಹಾರವಲ್ಲ. ಬದಲಾಗಿ ಇನ್ನಷ್ಟು ಸಮಸ್ಯೆ ಉದ್ಭವಿಸುವಂತೆ ಮಾಡಲಿದೆ ಎಂದು ಅವರು ಹೇಳಿದ್ದರು.
ಓದಿ: ಗಾಜಾದಲ್ಲಿ ಇಸ್ರೇಲ್ ವೈಮಾನಿಕ ದಾಳಿ: ಅಮೆರಿಕದ ಮಾನವೀಯ ಗುಂಪಿನ ಸದಸ್ಯ ಸಾವು