ಇಸ್ಲಾಮಾಬಾದ್: ಪಾಕಿಸ್ತಾನದ ಭಯೋತ್ಪಾದನಾ ನೆಲೆಗಳ ಇರಾನ್ ಕ್ಷಿಪಣಿ ಮತ್ತು ಡ್ರೋನ್‌ಗಳ ದಾಳಿ ನಡೆಸಿದೆ. ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದಲ್ಲಿನ ಸುನ್ನಿ ಉಗ್ರಗಾಮಿ ಗುಂಪುಗಳ ಮೇಲೆ ಈ ದಾಳಿ ನಡೆಸಲಾಗಿದೆ. ಇದರಲ್ಲಿ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಈ ದಾಳಿಗೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇರಾನ್‌ಗೆ ಪಾಕಿಸ್ತಾನ ಎಚ್ಚರಿಕೆ ನೀಡಿದ್ದು, ಆ ದೇಶದಲ್ಲಿದ್ದ ತನ್ನ ರಾಯಭಾರಿ ಹಿಂದಕ್ಕೆ ಕರೆಸಿಕೊಂಡಿದೆ.
ಇರಾನ್‌ನ ಸರ್ಕಾರಿ ಮಾಧ್ಯಮಗಳ ಪ್ರಕಾರ, ಮಂಗಳವಾರ ಪಾಕಿಸ್ತಾನದ ಜಿಹಾದಿ ಗುಂಪಿನ ಮೇಲೆ ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ಇರಾನ್ ದಾಳಿ ಮಾಡಿದೆ. ಬಲೂಚಿ ಉಗ್ರಗಾಮಿ ಸಂಘಟನೆಯಾದ ಜೈಶ್ ಅಲ್ - ಅದ್ಲ್‌ನ ಎರಡು ನೆಲೆಗಳನ್ನು ಮಂಗಳವಾರ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ಗುರಿಯಾಗಿಸಲಾಗಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಈ ದಾಳಿಯನ್ನು ಖಂಡಿಸಿದೆ. ಇರಾನ್ ಯಾವುದೇ ಕಾರಣವಿಲ್ಲದೇ ಪಾಕಿಸ್ತಾನದ ವಾಯುಪ್ರದೇಶವನ್ನು ಉಲ್ಲಂಘಿಸಿದೆ ಎಂದು ಹೇಳಿದೆ.
ಪ್ರಸ್ತುತ ಇರಾನ್‌ಗೆ ಭೇಟಿ ನೀಡುತ್ತಿರುವ ಪಾಕಿಸ್ತಾನದ ಇರಾನ್ ರಾಯಭಾರಿ ಸದ್ಯಕ್ಕೆ ಇಸ್ಲಾಮಾಬಾದ್‌ಗೆ ಹಿಂತಿರುಗುವುದಿಲ್ಲ ಎಂದು ವಿದೇಶಾಂಗ ಕಚೇರಿ ವಕ್ತಾರೆ ಮುಮ್ತಾಜ್ ಬಲೂಚ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇರಾನ್‌ನ ಪ್ರಚೋದನೆಗೆ ಪ್ರತೀಕಾರ ತೀರಿಸುವ ಹಕ್ಕನ್ನು ಪಾಕಿಸ್ತಾನವೂ ಹೊಂದಿದೆ ಎಂದು ಅವರು ಗುಡುಗಿದ್ದಾರೆ.
ಪಾಕಿಸ್ತಾನವು ಇರಾನ್‌ನಿಂದ ತನ್ನ ರಾಯಭಾರಿಯನ್ನು ಹಿಂಪಡೆಯಲು ನಿರ್ಧರಿಸಿದೆ. ಅಲ್ಲದೇ, ಈಗ ಇರಾನ್‌ಗೆ ಭೇಟಿ ನೀಡುತ್ತಿರುವ ಪಾಕಿಸ್ತಾನದ ಇರಾನ್ ರಾಯಭಾರಿ ಸದ್ಯಕ್ಕೆ ಹಿಂತಿರುಗದಿರಬಹುದು ಎಂದು ನಾವು ಅವರಿಗೆ (ಇರಾನ್) ತಿಳಿಸಿದ್ದೇವೆ. ಮುಂಬರುವ ದಿನಗಳಲ್ಲಿ ಪಾಕಿಸ್ತಾನ ಮತ್ತು ಇರಾನ್ ನಡುವೆ ನಡೆಯುತ್ತಿರುವ ಅಥವಾ ಯೋಜಿಸಲಾಗಿದ್ದ ಎಲ್ಲ ಉನ್ನತ ಮಟ್ಟದ ಭೇಟಿಗಳನ್ನು ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದೂ ಪಾಕ್ ವಕ್ತಾರೆ ತಿಳಿಸಿದ್ದಾರೆ.
ಕಳೆದ ರಾತ್ರಿ ಇರಾನ್‌ನಿಂದ ಪಾಕಿಸ್ತಾನದ ಸಾರ್ವಭೌಮತ್ವದ ಅಪ್ರಚೋದಿತ ಮತ್ತು ಸ್ಪಷ್ಟ ಉಲ್ಲಂಘನೆಯು ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್‌ನ ಉದ್ದೇಶಗಳು ಮತ್ತು ತತ್ವಗಳ ಉಲ್ಲಂಘನೆಯಾಗಿದೆ. ಈ ಕಾನೂನುಬಾಹಿರ ಕೃತ್ಯವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ಯಾವುದೇ ಸಮರ್ಥನೆಯನ್ನು ಹೊಂದಿಲ್ಲ. ಇದಕ್ಕೆ ಪ್ರತೀಕಾರ ತೀರಿಸುವ ಹಕ್ಕನ್ನು ಪಾಕಿಸ್ತಾನ ಹೊಂದಿದೆ. ಇದರ ಪರಿಣಾಮಗಳ ಜವಾಬ್ದಾರಿ ಸಂಪೂರ್ಣವಾಗಿ ಇರಾನ್‌ನ ಮೇಲಿರುತ್ತದೆ. ಈ ಸಂದೇಶವನ್ನು ಪಾಕಿಸ್ತಾನವು ಇರಾನ್ ಸರ್ಕಾರಕ್ಕೆ ರವಾನಿಸಿದೆ ಎಂದು ಮುಮ್ತಾಜ್ ಬಲೂಚ್ ವಿವರಿಸಿದ್ದಾರೆ.
ಮತ್ತೊಂದೆಡೆ, ಬಲೂಚಿಸ್ತಾನದ ಮಾಹಿತಿ ಇಲಾಖೆಯ ಸಚಿವ ಜಾನ್ ಅಚಕ್ಜೈ, ಇರಾನ್ ದಾಳಿಯಿಂದ ನಾವು ಅತ್ಯಂತ ನಿರಾಶೆಗೊಂಡಿದ್ದೇವೆ. ಏಕೆಂದರೆ ಭಯೋತ್ಪಾದನೆಯು ಸಂಘಟಿತ ಕ್ರಮದ ಅಗತ್ಯವಿರುವ ಎಲ್ಲ ದೇಶಗಳಿಗೆ ಸಾಮಾನ್ಯ ಬೆದರಿಕೆಯಾಗಿದೆ ಎಂದು ವಿದೇಶಾಂಗ ಕಚೇರಿ ಈಗಾಗಲೇ ಹೇಳಿದೆ. ಇರಾನ್‌ನಿಂದ ವಾಯು ಜಾಗವನ್ನು ಉಲ್ಲಂಘಿಸುವ ಇಂತಹ ಕೃತ್ಯಗಳು ನೆರೆಹೊರೆಯ ಸಂಬಂಧ, ನಂಬಿಕೆ ಮತ್ತು ಲೂಚಿಸ್ತಾನ್‌ನೊಂದಿಗೆ ಸ್ಥಾಪಿಸಲಾದ ನವೀಕೃತ ವ್ಯಾಪಾರ ಸಂಪರ್ಕಗಳನ್ನು ಹಾಳುಮಾಡುತ್ತವೆ ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ವಿಶ್ವದಲ್ಲಿ ಅತ್ಯಂತ ಬಲಿಷ್ಠ ಸೇನಾಪಡೆ ಹೊಂದಿರುವ ದೇಶ ಯಾವುದು? ಭಾರತ, ಚೀನಾ ಸ್ಥಾನ ಹೀಗಿದೆ