ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನ ಮಂತ್ರಿ ಶಹಬಾಜ್ ಶರೀಫ್ ಅವರು ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನ ಮಾಹಿತಿ ಸಚಿವೆ ಮರಿಯುಮ್ ಔರಂಗಜೇಬ್ ಟ್ವಿಟರ್‌ನಲ್ಲಿ ಈ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಪ್ರಧಾನಿ ಅನಾರೋಗ್ಯಕ್ಕೀಡಾಗಿದ್ದರು. ಹೀಗಾಗಿ ವೈದ್ಯರ ನಿರ್ದೇಶನದ ಮೇರೆಗೆ ಅವರು ಕೋವಿಡ್-19 ತಪಾಸಣೆ ಮಾಡಿಸಿದ್ದು, ಪಾಸಿಟಿವ್ ವರದಿ ಬಂದಿದೆ ಎಂದು ಔರಂಗಜೇಬ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಶಹಬಾಜ್ ಅವರ ಶೀಘ್ರ ಗುಣಮುಖರಾಗುವಂತೆ ದೇವರಲ್ಲಿ ಪ್ರಾರ್ಥಿಸುವಂತೆ ಅವರು ರಾಷ್ಟ್ರಕ್ಕೆ ಮತ್ತು ಪಿಎಂಎಲ್ - ಎನ್ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ ಮತ್ತು 2020 ರ ಜೂನ್‌ನಲ್ಲಿ ಈ ಹಿಂದೆ ಕೋವಿಡ್-19 ಅಲೆ ಕಡಿಮೆಯಾದ ನಂತರ ಪ್ರಧಾನ ಮಂತ್ರಿಗೆ ಈಗ ಮೂರನೇ ಬಾರಿ ಪಾಸಿಟಿವ್ ಬಂದಿದೆ.
ಶಹಬಾಜ್ ಷರೀಫ್ ಇತ್ತೀಚೆಗೆ ಲಂಡನ್‌ನಿಂದ ಹಿಂದಿರುಗಿದ್ದರು. ಅಲ್ಲಿ ಅವರು ತಮ್ಮ ಸಹೋದರ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿದ್ದರು.
ಇದನ್ನೂ ಓದಿ: ಪ್ರಧಾನಿ ನಿರ್ದೇಶನದ ಮೇಲೆ ನನ್ನ ಹತ್ಯೆ ಯತ್ನ: ಇಮ್ರಾನ್ ಖಾನ್ ಆರೋಪ