ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನವು ಭಯೋತ್ಪಾದನೆಯ ಬೆದರಿಕೆಯನ್ನು ತೊಡೆದುಹಾಕಲು ಮತ್ತು ದೇಶದಲ್ಲಿ ಸಂಪೂರ್ಣ ಶಾಂತಿಯನ್ನು ಸ್ಥಾಪಿಸಲು ಶುಕ್ರವಾರ ಪ್ರತಿಜ್ಞೆ ಮಾಡಿದೆ ಎಂದು ವಿದೇಶಾಂಗ ಕಚೇರಿ ಹೇಳಿದೆ.
ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಪಾಕ್ ವಿದೇಶಾಂಗ ಕಚೇರಿಯ ವಕ್ತಾರ ಆಸಿಫ್ ಇಫ್ತಿಕರ್, ಇಡೀ ನಾಡಿಗೆ ಭಯೋತ್ಪಾದನೆ ಸಾಮಾನ್ಯ ಬೆದರಿಕೆಯಾಗಿದೆ. ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಅಚಲವಾಗಿ ಉಳಿದಿದೆ. ಈ ಪಿಡುಗನ್ನು ಸೋಲಿಸಲು ಮತ್ತು ನಮ್ಮ ನಾಡು, ದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸಾಧಿಸಲು ನಾವು ಎಲ್ಲ ನಡೆಗಳನ್ನು ಅನುಸರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ನೀತಿಯು ಎಲ್ಲ ಪ್ರಮುಖ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದುವುದಾಗಿದೆ. ಅಮೆರಿಕ, ಚೀನಾ, ರಷ್ಯಾ ಸೇರಿದಂತೆ ಎಲ್ಲ ಪ್ರಮುಖ ರಾಷ್ಟ್ರಗಳೊಂದಿಗೆ ಪರಸ್ಪರ ಹಿತಾಸಕ್ತಿ, ಲಾಭ ಮತ್ತು ಗೌರವದ ಆಧಾರದ ಮೇಲೆ ಸಮತೋಲಿತ, ವಸ್ತುನಿಷ್ಠ ಮತ್ತು ವಿಶಾಲ ಆಧಾರಿತ ಸಂಬಂಧಗಳನ್ನು ನಾವು ಬಯಸುತ್ತೇವೆ ಎಂದೂ ಅವರು ಹೇಳಿದ್ದಾರೆ.
ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅಮೆರಿಕ ಭೇಟಿ ಕುರಿತ ಪ್ರಕಿಯಿಸಿದ ಅವರು, ಉಭಯ ದೇಶಗಳ ಹಿತದೃಷ್ಟಿಯಿಂದ ಬಾಂಧವ್ಯವನ್ನು ಮುಂದಕ್ಕೆ ಕೊಂಡೊಯ್ಯಲು, ನಿಶ್ಚಯವನ್ನು ಗಟ್ಟಿಯಾಗಿಸಲು ಇಚ್ಛೆ ಹೊಂದಿದ್ದೇವೆ. ಇದು ಎರಡೂ ಕಡೆಯವರಿಗೆ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಂಬಂಧಗಳನ್ನು ಬಲಪಡಿಸುತ್ತದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಶಿವಲಿಂಗದ ಬಗ್ಗೆ ಆಕ್ಷೇಪಾರ್ಹ ಪೋಸ್ಟ್: ಹಿಂದೂ ಕಾಲೇಜಿನ ಪ್ರಾಧ್ಯಾಪಕ ಅರೆಸ್ಟ್, ವಿದ್ಯಾರ್ಥಿಗಳ ಪ್ರೊಟೆಸ್ಟ್