ಇಸ್ಲಾಮಾಬಾದ್ : ಪಾಕಿಸ್ತಾನ ಸಂಸತ್ತು ವಿಸರ್ಜಿಸಿರುವ ಹಿನ್ನೆಲೆಯಲ್ಲಿ ಹಂಗಾಮಿ ಪ್ರಧಾನಿ ನೇಮಕಕ್ಕೆ ಸಲಹೆಗಳನ್ನು ಕೋರಿ ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ಅವರು ಹಾಲಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಅವರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಹಂಗಾಮಿ ಪ್ರಧಾನಿ ನೇಮಕ ಪ್ರಕ್ರಿಯೆಗೆ ಚಾಲನೆ ಸಿಕ್ಕಂತೆ ಆಗಿದೆ.
ಮೂರು ದಿನಗಳಲ್ಲಿ ಹಂಗಾಮಿ ಪ್ರಧಾನಿ ಹುದ್ದೆಗೆ ಖಾನ್ ಮತ್ತು ಷರೀಫ್ ಒಮ್ಮತದಿಂದ ಒಂದು ಹೆಸರನ್ನು ಶಿಫಾರಸು ಮಾಡಬೇಕು. ಒಂದು ವೇಳೆ ಬೇರೆ ಎರಡು ಹೆಸರನ್ನು ಕಳುಹಿಸಿದರೆ, ಹಂಗಾಮಿ ಪ್ರಧಾನಿಯನ್ನು ನೇಮಿಸುವ ಜವಾಬ್ದಾರಿ ಸಂಸದೀಯ ಸಮಿತಿಗೆ ಹೆಗಲಿಗೆ ಹೋಗಲಿದೆ ಎಂದು ವರದಿಯಾಗಿದೆ.
ಈ ಸಮಿತಿಯು ಎಂಟು ಸದಸ್ಯರನ್ನು ಒಳಗೊಂಡಿರುತ್ತದೆ. ಸರ್ಕಾರ ಮತ್ತು ವಿರೋಧ ಪಕ್ಷಗಳು ಪ್ರತಿನಿಧಿಸುವ ಅಸೆಂಬ್ಲಿ ಮತ್ತು ಸೆನೆಟ್ ಸದಸ್ಯರು ಒಳಗೊಂಡ ಸಮಿತಿಯನ್ನು ಸ್ಪೀಕರ್ ರಚಿಸುತ್ತಾರೆ ಎಂದೂ ಹೇಳಲಾಗಿದೆ. ಇಮ್ರಾನ್ ಖಾನ್ ವಿರುದ್ಧ ಸ್ವಪಕ್ಷೀಯರೇ ಬಂಡಾಯ ಎದ್ದಿರುವ ಕಾರಣ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದವು.
ಆದರೆ, ಇದರ ಹಿಂದೆ ವಿದೇಶಗಳ ಕೈವಾಡ ಇದೆ ಎಂದು ಖಾನ್ ಆರೋಪಿಸಿದ್ದರು. ಇದಾದ ನಂತರ ರವಿವಾರ ಅಸೆಂಬ್ಲಿಯನ್ನೇ ವಿಸರ್ಜನೆ ಮಾಡಲಾಗಿದೆ. ಹೀಗಾಗಿ, ಸದ್ಯ ಖಾನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಂತೆ ಆಗಿದೆ. ಆದರೂ, ಹಂಗಾಮಿ ಪ್ರಧಾನಿ ನೇಮಕದವರೆಗೂ ಖಾನ್ ಅವರನ್ನೇ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಸಿಲಾಗಿದೆ.
ಇದನ್ನೂ ಓದಿ: 1 ಕೆಜಿ ಅಕ್ಕಿಗೆ ₹220, 1 ಮೊಟ್ಟೆಗೆ ₹30, ತೆಂಗಿನ ಎಣ್ಣೆಗೆ ₹850! ಶ್ರೀಲಂಕಾದಲ್ಲಿ ಅಗತ್ಯವಸ್ತುಗಳು ದುಬಾರಿ