ರಿಯಾದ್ : ಸೌದಿ ಅರೇಬಿಯಾ ಮತ್ತು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC) ಸೇರಿದಂತೆ ತೈಲ ಉತ್ಪಾದಕರು ದಿನಕ್ಕೆ ಸುಮಾರು 1.16 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. ಸೌದಿ ಅರೇಬಿಯಾದ ರಾಜಧಾನಿ ಮತ್ತು ಮುಖ್ಯ ಹಣಕಾಸು ಕೇಂದ್ರವಾದ ರಿಯಾದ್ನಲ್ಲಿ ಮೇ ತಿಂಗಳಿಂದ 2023 ರ ಅಂತ್ಯದವರೆಗೆ ದಿನಕ್ಕೆ 500,000 ಬ್ಯಾರೆಲ್‌ಗಳ ಉತ್ಪಾದನೆ ಕಡಿತಗೊಳಿಸುವುದಾಗಿ ಹೇಳಿದೆ.
ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡುವ ಗುರಿ ಹೊಂದಿರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸೌದಿ ಅಧಿಕಾರಿಗಳು ಹೇಳಿದ್ದಾರೆ. ಕಚ್ಚಾ ತೈಲ ಉತ್ಪಾದನೆಯ ಪ್ರಮಾಣ ಕಡಿಮೆಯಾದರೆ, ತೈಲದ ದರವು ಏರಿಕೆಯಾಗಲಿದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳೂ ಹೆಚ್ಚುವ ಸಂಭವ ಇದೆ.
2022ರ ಅಕ್ಟೋಬರ್ 5ರಂದು ನಡೆದ 33ನೇ OPEC ಮತ್ತು OPEC ಅಲ್ಲದ ಸಚಿವರ ಸಭೆಯ ಸಮಯದಲ್ಲಿ ಸ್ವಯಂಪ್ರೇರಿತವಾಗಿ ಉತ್ಪಾದನೆ ಕಡಿತ ಮಾಡುವುದರ ಕುರಿತು ಚರ್ಚಿಸಲಾಗಿತ್ತು. ಒಪೆಕ್ ಪ್ಲಸ್ ಅವರು ತಮ್ಮ ನೀತಿಗಳಲ್ಲಿ ಯಾವುದೇ ಬದಲಾವಣೆ ಮಾಡಲು ಉದ್ದೇಶಿಸಿಲ್ಲ ಎಂದು ಹೇಳಿದ್ದರು. ಆದ್ರೆ, ಈಗ ಕೈಗೊಂಡ ಕ್ರಮ ಆಶ್ಚರ್ಯಕರವಾಗಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಒಂದು ವರ್ಷದ ಹಿಂದೆ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ತಮ್ಮ ಕಾರ್ಯಾಚರಣೆಯನ್ನು ಹಿಂತೆಗೆದುಕೊಂಡ ಪಾಶ್ಚಿಮಾತ್ಯ ಸೇವಾ ಕಂಪನಿಗಳು ಲಾಭವಿಲ್ಲದೆ ರಷ್ಯಾ ಉತ್ಪಾದನೆಯನ್ನ ಮುಂದುವರಿಸಲು ಹೆಣಗಾಡುತ್ತಿದೆ. ಇತ್ತೀಚಿನ ತಿಂಗಳುಗಳಲ್ಲಿ ಸೌದಿ ಅರೇಬಿಯಾದ ಉತ್ಪಾದನೆಯು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ನಿಗದಿಪಡಿಸಿದ ಉತ್ಪಾದನಾ ಕೋಟಾಕ್ಕಿಂತ ಕಡಿಮೆಯಾಗಿದೆ.
ಇದನ್ನೂ ಓದಿ: ಮಂಗಳೂರು: ಉಚ್ಚಿಲ ಸಮುದ್ರ ತೀರದಲ್ಲಿ ಮುಳುಗಿದ ಚೀನಾದ ನೌಕೆಯಿಂದ ತೈಲ ತೆರವು ಕಾರ್ಯ ಆರಂಭ
ಇರಾಕ್ನಿಂದಲೂ ತೈಲ ಉತ್ಪಾದನೆ ಕಡಿತ: ಮೇ ತಿಂಗಳಿನಿಂದ ಈ ವರ್ಷದ ಅಂತ್ಯದವರೆಗೆ ಇರಾಕ್ ಸ್ವಯಂಪ್ರೇರಿತವಾಗಿ ತೈಲ ಉತ್ಪಾದನೆಯನ್ನು ದಿನಕ್ಕೆ 211,000 ಬ್ಯಾರೆಲ್‌ಗಳಷ್ಟು (ಬಿಪಿಡಿ) ಕಡಿತಗೊಳಿಸಲಿದೆ ಎಂದು ದೇಶದ ತೈಲ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಜಾಗತಿಕ ತೈಲ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಒಪೆಕ್ ಪ್ಲಸ್ ಕೆಲವು ದೇಶಗಳು, ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC) ಮತ್ತು ಅದರ ಮಿತ್ರರಾಷ್ಟ್ರಗಳ ಸಮನ್ವಯದಲ್ಲಿ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ನಂತರ ತೈಲ ಬೆಲೆ ಏರಿಕೆಯಾಗಿದ್ದು, ಇರಾಕ್ ಸೇರಿದಂತೆ ತೈಲ ರಫ್ತು ಮಾಡುವ ದೇಶಗಳಿಗೆ ಲಾಭವಾಗಿದೆ. ಆದಾಗ್ಯೂ, ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗುವ ಭೀತಿಯಿಂದ ಕಳೆದ ಕೆಲವು ತಿಂಗಳುಗಳಲ್ಲಿ ತೈಲ ಬೆಲೆಗಳು ಇಳಿಕೆ ಕಂಡಿವೆ. ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಇರಾಕ್ 4.5 ಮಿಲಿಯನ್ ಬಿಪಿಡಿಗಿಂತ ಹೆಚ್ಚು ಉತ್ಪಾದಿಸುತ್ತಿದ್ದು, ಆರ್ಥಿಕತೆಯು ಕಚ್ಚಾ ತೈಲ ರಫ್ತಿನ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಇದನ್ನೂ ಓದಿ: ಫೆಬ್ರವರಿಯಲ್ಲಿ ರಷ್ಯಾದಿಂದ ಭಾರತಕ್ಕೆ ದಾಖಲೆ ಪ್ರಮಾಣದ ತೈಲ ಆಮದು