ಸಿಯೋಲ್(ದಕ್ಷಿಣ ಕೊರಿಯಾ): ಉತ್ತರ ಕೊರಿಯಾ ತನ್ನ ಪೂರ್ವ ಕರಾವಳಿಯ ಸಮುದ್ರದತ್ತ ಭಾನುವಾರ ಖಂಡಾಂತರ ಕ್ಷಿಪಣಿಯನ್ನು ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.
ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಮುಂದಿನ ವಾರ ದಕ್ಷಿಣ ಕೊರಿಯಾಗೆ ಆಗಮಿಸಲಿದ್ದಾರೆ. ಅಲ್ಲದೆ, ಯುಎಸ್ ಯುದ್ಧ ವಿಮಾನವಾಹಕ ನೌಕೆಯು ಜಂಟಿ ಸಮರಾಭ್ಯಾಸ ನಡೆಸಲು ದೇಶಕ್ಕೆ ಆಗಮಿಸಿರುವ ಸಂದರ್ಭದಲ್ಲೇ ಈ ಕ್ಷಿಪಣಿ ಪ್ರಯೋಗ ನಡೆಸಲಾಗಿದೆ ಎಂದು ದಕ್ಷಿಣ ಕೊರಿಯಾ ಸೇನಾ ಜಂಟಿ ಮುಖ್ಯಸ್ಥರು ಕಿಡಿಕಾರಿದ್ದಾರೆ.
ಉತ್ತರ ಕೊರಿಯಾ ಶಸ್ತ್ರಾಸ್ತ್ರ ಪರೀಕ್ಷೆಯನ್ನು ಮುಂದುವರೆಸಿದೆ ಎಂದು ದಕ್ಷಿಣ ಕೊರಿಯಾ ಈ ಹಿಂದೆ ಜೂನ್ನಲ್ಲಿಯೂ ಆರೋಪಿಸಿತ್ತು. 'ಉತ್ತರ ಕೊರಿಯಾದಿಂದ ಕ್ಷಿಪಣಿಯೊಂದನ್ನು ಪೂರ್ವ ಸಮುದ್ರದತ್ತ ಉಡಾವಣೆ ಮಾಡಲಾಗಿದೆ' ಎಂದು ಜಪಾನ್‌ನ ಮಾಹಿತಿ ಉಲ್ಲೇಖಿಸಿ ಹೇಳಿಕೆ ಬಿಡುಗಡೆ ಮಾಡಿತ್ತು.
ದಕ್ಷಿಣ ಕೊರಿಯಾ ಸೇನೆ ಈ ಖಂಡಾಂತರ ಕ್ಷಿಪಣಿ ಉಡಾವಣೆಯನ್ನು ಗಂಭೀರ ಪ್ರಚೋದನೆ ಎಂದು ಖಂಡಿಸಿದೆ. ಇದು ಯುಎನ್ ಭದ್ರತಾ ಮಂಡಳಿಯ ನಿರ್ಣಯಗಳ ಉಲ್ಲಂಘನೆಯಾಗಿದೆ. ದೇಶ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಶಾಂತಿ ಮತ್ತು ಸುರಕ್ಷತೆಗೆ ಭಂಗ ತರುವ ಕೃತ್ಯ ಎಂದು ಆರೋಪಿಸಿದೆ.
2022ರಲ್ಲಿ ಉತ್ತರ ಕೊರಿಯಾ ತನ್ನ ಖಂಡಾಂತರ ಕ್ಷಿಪಣಿ ಪರೀಕ್ಷಾ ಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚಿಸಿದೆ. 2017ರಿಂದ ಅದರ ಮೊದಲ ಖಂಡಾಂತರ ಕ್ಷಿಪಣಿ ಸೇರಿದಂತೆ ಈವರೆಗೆ 30ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಪರೀಕ್ಷೆ ನಡೆಸಲಾಗಿದೆ. ಈ ಮೂಲಕ ತನ್ನ ಮಿಲಿಟರಿ ಸಾಮರ್ಥ್ಯ ವಿಸ್ತರಣಾ ನೀತಿಯನ್ನು ಉತ್ತರ ಕೊರಿಯಾ ಮುಂದುವರೆಸಿದೆ.
ಇದನ್ನೂ ಓದಿ: ಉತ್ತರ ಕೊರಿಯಾದಿಂದ ಮತ್ತೆ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ : ದ.ಕೊರಿಯಾ ಸೇನೆ