ಇಸ್ಲಾಮಾಬಾದ್ (ಪಾಕಿಸ್ತಾನ): ಬಲೂಚ್ ಯುವಕರ ಹತ್ಯೆ ಖಂಡಿಸಿ ಚಳವಳಿ ನಡೆಸುತ್ತಿರವವರ ಮೇಲೆ ಪಾಕಿಸ್ತಾನ ಪೊಲೀಸರ ದೌರ್ಜನ್ಯ ಮುಂದುವರೆದಿದೆ. ಪ್ರತಿಭಟನಾನಿರತ ಮಹಿಳೆಯರನ್ನು ಪಾಕಿಸ್ತಾನದ ಇಸ್ಲಾಮಾಬಾದ್ ಪೊಲೀಸರು ಬಿಡುಗಡೆ ಮಾಡಿದ್ದು, ಇನ್ನೂ ನೂರಾರು ಜನರನ್ನು ಬಂಧನದಲ್ಲಿರಿಸಲಾಗಿದೆ. ಮಹಿಳೆಯರನ್ನು 26 ಗಂಟೆಗಳ ಕಾಲ ಹಿಂಸಿಸಿ, ಅವಮಾನ ಹಾಗೂ ಕಿರುಕುಳ ನೀಡಿದ ಬಳಿಕ ರಿಲೀಸ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬಲೂಚ್ ಹತ್ಯಾಕಾಂಡದ ವಿರುದ್ಧದ ಚಳವಳಿಯ 28ನೇ ದಿನದಂದು 26 ಗಂಟೆಗಳ ಅವಮಾನ, ಕಿರುಕುಳ ಮತ್ತು ಚಿತ್ರಹಿಂಸೆ ಅನುಭವಿಸಿದ ನಂತರ ಇಸ್ಲಾಮಾಬಾದ್ ಪೊಲೀಸರು ಬಂಧಿತ ಮಹಿಳಾ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಿದ್ದಾರೆ ಎಂದು ಬಲೂಚ್ ಯಕ್ಜಾತಿ ಸಮಿತಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. ಬಲೂಚ್ಗಾಗಿ ಹೋರಾಡುತ್ತಿರುವ ಮಹಿಳೆಯರು ಅನುಭವಿಸಿದ ಸಂಕಷ್ಟ, ಅವರನ್ನು ನಡೆಸಿಕೊಂಡ ಬಗ್ಗೆ ಕಿಡಿಕಾರಿದೆ.
ಮಹಿಳಾ ಕಾರ್ಯಕರ್ತೆಯರನ್ನು ಬಿಡುಗಡೆ ಮಾಡಿದ್ದರೂ ಕೂಡ, ಸುಮಾರು 200ಕ್ಕೂ ಅಧಿಕ ಪುರುಷ ಹೋರಾಟಗಾರರನ್ನು ಇನ್ನೂ ಕೂಡ ಪೊಲೀಸ್ ವಶದಲ್ಲಿದ್ದಾರೆ. ಅಲ್ಲದೆ, 162 ಜನರನ್ನು ಅಡಿಯಾಲಾ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಜೊತೆಗೆ ಸುಮಾರು 50 ಮಂದಿಯನ್ನು ಇಸ್ಲಾಮಾಬಾದ್ನ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಹೀಗಾಗಿ, ಬಲೂಚ್ ಯಕ್ಜಾತಿ ಸಮಿತಿಯು ಬಲೂಚ್ ಹತ್ಯಾಕಾಂಡ ಮತ್ತು ಹೆಚ್ಚುವರಿ ನ್ಯಾಯಾಂಗ ಅಪಹರಣಗಳ ವಿರುದ್ಧ ತನ್ನ ಹೋರಾಟ ಮುಂದುವರೆಸುವ ನಿರ್ಣಯ ವ್ಯಕ್ತಪಡಿಸಿದೆ. ಮುಂದಿನ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಘೋಷಣೆ ಮಾಡುವುದಾಗಿ ಸಮಿತಿ ಹೇಳಿದೆ.
ಕೆಲ ದಿನಗಳ ಹಿಂದೆ ಬಲೂಚ್ ಯುವಕರ ಹತ್ಯೆ ಖಂಡಿಸಿ ಯಕ್ಜಾತಿ ಸಮಿತಿಯು ಬೃಹತ್ ಮೆರವಣಿಗೆ ನಡೆಸಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿತ್ತು. ನಾಲ್ವರು ಯುವಕರನ್ನು ಬಲೂಚಿಸ್ತಾನದ ಕೆಚ್ ಜಿಲ್ಲೆಯಲ್ಲಿ ಕೊಲೆ ಮಾಡಿದ್ದ ಬೆನ್ನಲ್ಲೇ ಆಕ್ರೋಶ ಭುಗಿಲೆದ್ದಿತ್ತು. ಬಲೂಚಿಸ್ತಾನ, ಪಂಜಾಬ್ನ ಹಲವು ಜಿಲ್ಲೆಗಳಲ್ಲಿ ಪ್ರತಿಭಟನಾ ರ‍್ಯಾಲಿ ನಡೆದಿತ್ತು. ಘಟನೆ ಬಗ್ಗೆ ಬಲೂಚ್ ಮಾನವ ಹಕ್ಕುಗಳ ಮಂಡಳಿಯು ಇಸ್ಲಾಮಾಬಾದ್ ಪೊಲೀಸ್ ಮತ್ತು ಸರ್ಕಾರದ ಅಮಾನವೀಯ ಮತ್ತು ಕ್ರೂರ ಕೃತ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು.
ಮೆರವಣಿಗೆಯಲ್ಲಿ ಭಾಗವಹಿಸಿದ ಬಲೂಚ್ ಹೋರಾಟಗಾರರಲ್ಲಿ ವಯಸ್ಕರು, ಮಹಿಳೆಯರು ಹಾಗೂ ಯುವಕರನ್ನೇ ಗುರಿಯಾಗಿಸಿ ದೌರ್ಜನ್ಯ ಎಸಗುವುದು ಹಾಗೂ ಬಂಧಿಸಿರುವುದನ್ನು ಮಾನವ ಹಕ್ಕುಗಳ ಮಂಡಳಿ ಖಂಡಿಸಿದೆ. ತಮ್ಮ ಪ್ರೀತಿಪಾತ್ರರಿಗೆ ನ್ಯಾಯ ಒದಗಿಸಲು ಹೋರಾಡಿದವರು ಈಗ ಪಾಕಿಸ್ತಾನದ ವಿವಿಧ ಭಾಗಗಳಿಂದ ಬಲವಂತವಾಗಿ ಕಣ್ಮರೆ ಆಗುತ್ತಿದ್ದಾರೆ ಎಂದು ಮಂಡಳಿಯು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಕಿಡಿಕಾರಿದೆ.
ಪಾಕಿಸ್ತಾನದ ಅಧಿಕಾರಿಗಳು ಮಾನವ ಹಕ್ಕುಗಳ ಮೌಲ್ಯವನ್ನು ಗೌರವಿಸುವ ಬಗ್ಗೆ ತಾವು ಮಾಡಿದ್ದ ಪ್ರತಿಜ್ಞೆಯನ್ನು ಎತ್ತಿಹಿಡಿಯಬೇಕು. ಈ ಮೂಲಕ ಬಲಿಪಶುಗಳಾಗುತ್ತಿರುವ ಜನರಿಗೆ ನ್ಯಾಯ ಒದಗಿಸಬೇಕು. ಬಲೂಚ್ ವಿರುದ್ಧದ ಅಪರಾಧಗಳಿಗೆ ಅಧಿಕಾರಿಗಳೇ ಜವಾಬ್ದಾರರು ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾನವ ಹಕ್ಕುಗಳ ಮಂಡಳಿ ಹೇಳಿದೆ.
ಇದನ್ನೂ ಓದಿ: ಬಲೂಚ್ ಮಹಿಳೆಯರನ್ನು ಎಳೆದಾಡಿದ ಪೊಲೀಸರು.. ಪಾಕ್ ಸರ್ಕಾರದ ಅಮಾನವೀಯ ಕೃತ್ಯ