ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಹೊಗಳಿಕೆಯ ಸುರಿಮಳೆಗೈದಿದ್ದು, ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅವರನ್ನು ಬೆದರಿಸಲು ಅಥವಾ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 14 ನೇ VTB Investment forum Russia Calling ಸಮಾವೇಶದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ವಿಷಯಕ್ಕೆ ಬಂದಾಗ ಪ್ರಧಾನಿ ಮೋದಿಯವರ ಕಠಿಣ ನಿಲುವು ಶ್ಲಾಘನೀಯ ಎಂದರು.
"ಭಾರತ ಮತ್ತು ಭಾರತೀಯರ ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾದ ಯಾವುದೇ ಕ್ರಮ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಮೋದಿಯವರನ್ನು ಬೆದರಿಸುವುದು ಅಥವಾ ಒತ್ತಾಯಿಸುವುದು ಸಾಧ್ಯವಿಲ್ಲ. ನನ್ನ ಮೇಲೆಯೂ ಅಂಥ ಒತ್ತಡಗಳಿರುವುದರಿಂದ ನನಗೆ ಅದರ ಬಗ್ಗೆ ತಿಳಿದಿದೆ. ಆದರೆ ಅವರು ಮತ್ತು ನಾನು ಯಾವತ್ತೂ ಇದರ ಬಗ್ಗೆ ಮಾತನಾಡಿಲ್ಲ. ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಅವರ ಕಠಿಣ ನಿಲುವು ನನಗೆ ಹಲವಾರು ಬಾರಿ ಆಶ್ಚರ್ಯ ತಂದಿದೆ" ಎಂದು ಪುಟಿನ್ ತಿಳಿಸಿದರು.
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮಾತನಾಡಿದ ಅಧ್ಯಕ್ಷ ಪುಟಿನ್, ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳು ಎಲ್ಲಾ ದಿಕ್ಕುಗಳಲ್ಲಿ ಹಂತಹಂತವಾಗಿ ಅಭಿವೃದ್ಧಿ ಹೊಂದುತ್ತಿವೆ ಎಂದು ಹೇಳಿದರು. ಪ್ರಧಾನಿ ಮೋದಿಯವರ ನೀತಿ ಎರಡೂ ರಾಷ್ಟ್ರಗಳ ನಡುವಿನ ಸಂಬಂಧಗಳಿಗೆ ಪ್ರಾಥಮಿಕ ಅಡಿಪಾಯವಾಗಿದೆ ಎಂದು ಪ್ರತಿಪಾದಿಸಿದರು.
ದ್ವಿಪಕ್ಷೀಯ ವ್ಯಾಪಾರ ವೇಗಗೊಳಿಸಲು ಉಭಯ ದೇಶಗಳು ಏನು ಮಾಡಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಪುಟಿನ್, "ರಷ್ಯಾ ಮತ್ತು ಭಾರತದ ನಡುವಿನ ಸಂಬಂಧಗಳು ಎಲ್ಲಾ ದಿಕ್ಕುಗಳಲ್ಲಿ ಹಂತಹಂತವಾಗಿ ಅಭಿವೃದ್ಧಿ ಹೊಂದುತ್ತಿವೆ ಮತ್ತು ಇದಕ್ಕೆ ಮುಖ್ಯ ಖಾತರಿ ಪ್ರಧಾನಿ ಮೋದಿ ಅನುಸರಿಸಿದ ನೀತಿಯಾಗಿದೆ. ಅವರು ಖಂಡಿತವಾಗಿಯೂ ವಿಶ್ವನಾಯಕರ ಗುಂಪಿಗೆ ಸೇರಿದವರು" ಎಂದರು.
ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟಿನ ಬಗ್ಗೆ ಮಾತನಾಡಿದ ಅವರು, "ಕಳೆದ ವರ್ಷ ಉಭಯ ದೇಶಗಳ ವ್ಯಾಪಾರ ವಹಿವಾಟು ವರ್ಷಕ್ಕೆ 35 ಬಿಲಿಯನ್ ಡಾಲರ್ ಆಗಿತ್ತು ಮತ್ತು ಈ ವರ್ಷದ ಮೊದಲಾರ್ಧದಲ್ಲಿ ಅದು ಈಗಾಗಲೇ 33.5 ಬಿಲಿಯನ್ ದಾಟಿದೆ. ಅಂದರೆ ಬೆಳವಣಿಗೆ ಗಮನಾರ್ಹವಾಗಿದೆ. ಹೌದು, ರಷ್ಯಾದ ಇಂಧನ ಸಂಪನ್ಮೂಲಗಳ ಮೇಲಿನ ರಿಯಾಯಿತಿಯಿಂದಾಗಿ ಭಾರತವು ದೊಡ್ಡ ಪ್ರಮಾಣದ ಲಾಭ ಪಡೆಯುತ್ತಿದೆ. ಮೋದಿ ನಿಜವಾಗಿಯೂ ಸರಿಯಾದ ಕೆಲಸವನ್ನೇ ಮಾಡುತ್ತಿದ್ದಾರೆ" ಎಂದು ಪುಟಿನ್ ಹೇಳಿದರು.
ಇದನ್ನೂ ಓದಿ: 'ವ್ಯಾಸಂಗದ ವೀಸಾ'ಗಾಗಿ ತೋರಿಸಬೇಕಾದ ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್ ದ್ವಿಗುಣಗೊಳಿಸಿದ ಕೆನಡಾ