ಬಾಗ್ದಾದ್, ಇರಾಕ್: ಪ್ರಬಲ ಶಿಯಾ ಧರ್ಮಗುರು ಮೊಕ್ತಾದಾ ಅಲ್ - ಸದರ್ ಅವರ ಸಾವಿರಾರು ಬೆಂಬಲಿಗರು ಬಾಗ್ದಾದ್‌ನಲ್ಲಿನ ಪ್ರಮುಖ ಇರಾಕಿನ ಸರ್ಕಾರಿ ಕಟ್ಟಡಗಳಿಗೆ ನುಗ್ಗಿ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದು, ಅನೇಕರು ಜನರು ಗಾಯಗೊಂಡಿದ್ದಾರೆ.
ಇರಾಕಿನ ಭದ್ರತಾ ಪಡೆಗಳು ಅಶ್ರುವಾಯು ಎಸೆದವು ಮತ್ತು ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದವು. ಇದರಿಂದ ಮತ್ತಷ್ಟು ಕೋಪಗೊಂಡ ಪ್ರತಿಭಟನಾಕಾರರು ಸರ್ಕಾರಿ ಕಚೇರಿಗಳಿಗೆ ನುಗ್ಗಿದರು. ಈ ವೇಳೆ, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಮತ್ತು ಭದ್ರತಾ ಪಡೆ ಹರಸಾಹಸ ಪಟ್ಟರು ಪ್ರಯೋಜನವಾಗಲಿಲ್ಲ. ಪ್ರತಿಭಟನೆಯಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿನ ದಾಳಿಗಳು ನಡೆದವು ಎಂದು ಆಂತರಿಕ ಸಚಿವಾಲಯದ ಮೂಲವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಈ ದುರ್ಘಟನೆಯಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ಸೇರಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೂರ್ಯಾಸ್ತದ ಮೊದಲು ಭದ್ರತಾ ಪಡೆಗಳು ಅಧ್ಯಕ್ಷೀಯ ಭವನ ಮತ್ತು ಪ್ರಧಾನ ಮಂತ್ರಿಯ ಪ್ರಧಾನ ಕಚೇರಿಯಿಂದ ಪ್ರತಿಭಟನೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದವು. ಆದರೆ, ಹಲವಾರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಮುಂದುವರೆಯಿತು.
ಪ್ರತಿಭಟನಾಕಾರರ ಮೇಲೆ ಜೀವಂತ ಗುಂಡುಗಳನ್ನು ಬಳಸದಂತೆ ಭದ್ರತಾ ಪಡೆಗಳಿಗೆ ಇರಾಕಿನ ಪ್ರಧಾನ ಮಂತ್ರಿ ಮುಸ್ತಫಾ ಅಲ್ ಕದಿಮಿ, ಇರಾಕಿನ ಪಡೆಗಳ ಕಮಾಂಡರ್ ಇನ್ ಚೀಫ್ ಆದೇಶಿಸಿದ್ದಾರೆ. ಘರ್ಷಣೆಯಲ್ಲಿ ಸಂಭವಿಸಿದ್ದ ಸಾವುನೋವುಗಳ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ದುಷ್ಕರ್ಮಿಗಳನ್ನು ಗುರುತಿಸಿ ಕಾನೂನಿನ ಪ್ರಕಾರ ಶಿಕ್ಷೆಗೊಳಪಡಿಸುವುದೇ ನಮ್ಮ ಗುರಿ ಎಂದು ಪಿಎಂ ಮುಸ್ತಫಾ ಅಲ್ ಕದಿಮಿ ಹೇಳಿದ್ದಾರೆ.
ಅಲ್ ಸದರ್ ರಾಜಕೀಯವನ್ನು ತೊರೆಯುವುದಾಗಿ ಹೇಳಿದ ಸ್ವಲ್ಪ ಸಮಯದ ನಂತರ ಅವರ ಬೆಂಬಲಿಗರು ಹಸಿರು ವಲಯದ ಇರಾಕ್‌ನ ಸರ್ಕಾರಿ ಕಟ್ಟಡಗಳನ್ನು ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದರು. ಹಸಿರು ವಲಯದಲ್ಲಿ ಪ್ರಮುಖ ಸರ್ಕಾರಿ ಕಟ್ಟಡಗಳು, ಇರಾಕಿನ ಉನ್ನತ ಅಧಿಕಾರಿಗಳ ನಿವಾಸಗಳು ಮತ್ತು ಕೆಲವು ವಿದೇಶಿ ರಾಯಭಾರ ಕಚೇರಿಗಳಿವೆ. ಉದ್ವಿಗ್ನ ಪರಿಸ್ಥಿತಿ ಅರಿತ ಇರಾಕಿನ ಜಂಟಿ ಕಾರ್ಯಾಚರಣೆ ಕಮಾಂಡ್ ಎಲ್ಲಾ ಪ್ರಾಂತ್ಯಗಳಲ್ಲಿ ರಾತ್ರಿ 7 ರಿಂದ ಕರ್ಫ್ಯೂ ಘೋಷಿಸಿತು.
ಶಿಯಾ ಸಂಸದೀಯ ಪಕ್ಷಗಳಲ್ಲಿ ಕಳೆದ ವಾರ ಅಲ್ - ಸದರ್ ಮತ್ತು ಅವರ ಪ್ರತಿಸ್ಪರ್ಧಿಗಳ ನಡುವೆ ರಾಜಕೀಯ ವಿವಾದಗಳು ಉಲ್ಬಣಗೊಂಡಿವೆ. ಜುಲೈ 30 ರಂದು ಅಲ್ - ಸದರ್ ಅವರ ಬೆಂಬಲಿಗರು ಕೇಂದ್ರ ಬಾಗ್ದಾದ್‌ನಲ್ಲಿರುವ ಹಸಿರು ವಲಯಕ್ಕೆ ನುಗ್ಗಿದರು. ಸಂಸತ್ತಿನ ವಿಸರ್ಜನೆ ಮತ್ತು ಅವಧಿಪೂರ್ವ ಚುನಾವಣೆಗಳಿಗೆ ಒತ್ತಾಯಿಸಿ ಸಂಸತ್ತಿನ ಕಟ್ಟಡದಲ್ಲಿ ಮತ್ತು ಹೊರಗೆ ಧರಣಿ ನಡೆಸಿದರು. ಕಳೆದ ತಿಂಗಳುಗಳಲ್ಲಿ ಶಿಯಾ ಪಕ್ಷಗಳ ನಡುವೆ ಮುಂದುವರಿದ ವಿವಾದಗಳು ಹೊಸ ಇರಾಕಿ ಸರ್ಕಾರದ ರಚನೆಗೆ ಅಡ್ಡಿಯಾಗಿವೆ. ಸಂವಿಧಾನದ ಅಡಿ 329-ಆಸನಗಳ ಸಂಸತ್ತಿನ ಮೂರನೇ ಎರಡರಷ್ಟು ಬಹುಮತದಿಂದ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ.
ಓದಿ: ಆರ್ಮಿಯಂತೆ ರೆಡಿಯಾಗಿ ಬಂದಿದ್ದ ಶಸ್ತ್ರಸಜ್ಜಿತ ವ್ಯಕ್ತಿಯಿಂದ ಗುಂಡಿನ ದಾಳಿ.. ಇಬ್ಬರ ಸಾವು, ಐವರಿಗೆ ಗಾಯ