ಟ್ರಿಪೋಲಿ (ಲಿಬಿಯಾ) : ಲಿಬಿಯಾದಲ್ಲಿನ ವಿಶ್ವಸಂಸ್ಥೆ ಬೆಂಬಲಿತ ಸರಕಾರವನ್ನು ಬೆಂಬಲಿಸುವ ಎರಡು ಭಯೋತ್ಪಾದಕ ಗುಂಪುಗಳ ನಡುವೆ ಟ್ರಿಪೋಲಿಯಲ್ಲಿ ಭುಗಿಲೆದ್ದ ಭೀಕರ ಘರ್ಷಣೆಯಲ್ಲಿ ಕನಿಷ್ಠ 55 ಮಂದಿ ಮೃತಪಟ್ಟು, 146 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಒಂದು ಮಿಲಿಶಿಯಾ (ಭಯೋತ್ಪಾದಕ) ಗುಂಪಿನ ಮಿಲಿಟರಿ ಕಮಾಂಡರ್ ಬಂಧನದ ಬಳಿಕ ಟ್ರಿಪೋಲಿ ರಣಾಂಗಣವಾಗಿದೆ.
ರಾಜಧಾನಿ ಟ್ರಿಪೋಲಿಯ ಕೆಲ ಭಾಗಗಳಲ್ಲಿ ಸೋಮವಾರ ಸಂಜೆ 444 ಬ್ರಿಗೇಡ್ ಮತ್ತು ವಿಶೇಷ ಪ್ರತಿರೋಧ ಪಡೆ ನಡುವೆ ಹಿಂಸಾಚಾರ ಭುಗಿಲೆದ್ದಿದೆ. 444 ಬ್ರಿಗೇಡ್ನ ಪ್ರಬಲ ಕಮಾಂಡರ್ನನ್ನು ಬಂಧಿಸಿದ ಬಳಿಕ ಸಂಘರ್ಷ ಆರಂಭವಾಗಿದೆ. ಬುಧವಾರ ಸಾವಿನ ಸಂಖ್ಯೆಯನ್ನು ದೃಢಪಡಿಸಿದ ಲಿಬಿಯಾದ ತುರ್ತು ಔಷಧ ಮತ್ತು ನೆರವು ಕೇಂದ್ರ, ಬಲಿಯಾದವರಲ್ಲಿ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಸೇರಿದ್ದು, ಈವರೆಗೂ ಹಲವಾರು ಶವಗಳನ್ನು ಗುರುತಿಸಲಾಗಿಲ್ಲ ಎಂದು ಹೇಳಿದೆ.
ತುರ್ತು ಸೇವಾ ಕೇಂದ್ರದ ಪ್ರಕಾರ 234 ಕುಟುಂಬಗಳನ್ನು ಹೋರಾಟ ನಡೆಯುತ್ತಿರುವ ಮುಂಚೂಣಿ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ. 60 ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗಿದ್ದು, ಗಾಯಾಳುಗಳ ಚಿಕಿತ್ಸೆಗೆ ಮೂರು ಸ್ಥಳೀಯ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ದೇಶದ ಪ್ರಧಾನಿ ಮತ್ತು ಟ್ರಿಪೋಲಿಯ ಹಿರಿಯರು ನಡೆಸಿದ ರಾಜಿ ಸಂಧಾನದ ಬಳಿಕ ಹೋರಾಟ ನಿರತ ಬಣಗಳು ಕದನವಿರಾಮಕ್ಕೆ ಒಪ್ಪಿದ್ದು, ಹೋರಾಟ ನಿಂತಿದೆ ಎಂದು ಆಂತರಿಕ ಸಚಿವಾಲಯ ಮಂಗಳವಾರ ಪ್ರಕಟಿಸಿದೆ.
ಟ್ರಿಪೋಲಿಯ ಅನೇಕ ಹಿರಿಯರೊಂದಿಗೆ ಬುಧವಾರ ನಡೆದ ಸಭೆಯಲ್ಲಿ, ಪ್ರಧಾನಿ ಅಬ್ದುಲ್-ಹಮೀದ್ ದಬೀಬಾ, ದೇಶದಲ್ಲಿ ಮತ್ತೆ ಹೋರಾಟ ಆರಂಭವಾಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು. "ಮತ್ತೆ ಹೋರಾಟ ಆರಂಭವಾಗುವುದು ಸ್ವೀಕಾರಾರ್ಹವಲ್ಲ ಮತ್ತು ದೇಶವು ಯಾವುದೇ ಬೇಜವಾಬ್ದಾರಿ ನಡವಳಿಕೆಯನ್ನು ಸಹಿಸುವುದಿಲ್ಲ ಎಂದು ಪ್ರಧಾನಿ ಹೇಳಿದರು. ದೇಶದಲ್ಲಿ ಶಾಂತಿ ಸುಭದ್ರತೆ ಕಾಪಾಡಲು ಎಲ್ಲಾ ಭದ್ರತಾ ಸಂಸ್ಥೆಗಳು ಪ್ರಯತ್ನಿಸುವಂತೆ ಅವರು ಸೂಚನೆ ನೀಡಿದರು." ಎಂದು ಸರ್ಕಾರದ ಮಾಹಿತಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭೀಕರ ಹೋರಾಟದಿಂದಾಗಿ ರಾಜಧಾನಿಯ ಮುಖ್ಯ ವಿಮಾನ ನಿಲ್ದಾಣವನ್ನು ಕೆಲ ಕಾಲ ಮುಚ್ಚಲಾಗಿತ್ತು. ಬುಧವಾರದ ನಂತರ ವಿಮಾನ ನಿಲ್ದಾಣ ಮತ್ತೆ ತೆರೆಯಲ್ಪಟ್ಟಿದೆ. 2011ರಲ್ಲಿ ಲಿಬಿಯಾದ ದೀರ್ಘಕಾಲದ ಆಡಳಿತಗಾರ ಕರ್ನಲ್ ಮುಅಮ್ಮರ್ ಗಡಾಫಿಯನ್ನು ಪದಚ್ಯುತಗೊಳಿಸಿ ಹತ್ಯೆ ಮಾಡಿದ ಬಳಿಕ ದೇಶದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿದೆ.
ದೇಶವು ಈಗ ಟ್ರಿಪೋಲಿಯಲ್ಲಿ ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಮಧ್ಯಂತರ ಸರ್ಕಾರ ಮತ್ತು ಪೂರ್ವದಲ್ಲಿ ಮತ್ತೊಂದು ಸರ್ಕಾರದ ನಡುವೆ ಸ್ಪಷ್ಟವಾಗಿ ವಿಭಜನೆಯಾಗಿದೆ. 2020 ರ ಕದನ ವಿರಾಮವು ಸ್ವಲ್ಪಮಟ್ಟಿಗೆ ಶಾಂತಿಯನ್ನು ತಂದಿದೆಯಾದರೂ, ಎಲ್ಲಾ ಕಡೆಗಳಲ್ಲಿ ಬೇರೂರಿರುವ ಗುಂಪುಗಾರಿಕೆಯು ಸತತವಾಗಿ ಶಾಂತಿ ಕದಡಲು ಕಾರಣವಾಗುತ್ತಿದೆ.
ಪ್ರಭಾವಿ 444 ಬ್ರಿಗೇಡ್ ಮತ್ತು ವಿಶೇಷ ಪ್ರತಿರೋಧ ಪಡೆ ಅಥವಾ ಅಲ್-ರದಾ ಫೋರ್ಸ್ ನಡುವೆ ಸೋಮವಾರ ರಾತ್ರಿಯಿಂದ ಮಂಗಳವಾರದವರೆಗೆ ಸಂಘರ್ಷ ನಡೆಯಿತು. 444 ಬ್ರಿಗೇಡ್ ಲಿಬಿಯಾದ ರಕ್ಷಣಾ ಸಚಿವಾಲಯದೊಂದಿಗೆ ಸಂಯೋಜಿತವಾಗಿದ್ದು, ಉತ್ತರ ಆಫ್ರಿಕಾದ ದೇಶದ ಅತ್ಯಂತ ಶಿಸ್ತುಬದ್ಧ ಸಶಸ್ತ್ರ ಗುಂಪು ಎಂದು ಹೆಸರುವಾಸಿಯಾಗಿದೆ.
ಇನ್ನು ಸ್ಪೆಷಲ್ ಡಿಟೆರೆನ್ಸ್ ಫೋರ್ಸ್ ಒಂದು ಪ್ರಬಲವಾದ ಅಲ್ಟ್ರಾಕನ್ಸರ್ವೇಟಿವ್ ಮಿಲಿಶಿಯಾ ಆಗಿದ್ದು, ಇದು ರಾಜಧಾನಿಯ ಪೊಲೀಸ್ ಪಡೆಯಾಗಿ ಕಾರ್ಯನಿರ್ವಹಿಸುತ್ತದೆ. ದೀರ್ಘಕಾಲದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯನ್ನು 2011 ರಲ್ಲಿ ಪದಚ್ಯುತಗೊಳಿಸಿದ ನಂತರ ಅಧಿಕಾರಕ್ಕಾಗಿ ಹೋರಾಡುತ್ತಿರುವ ಗುಂಪುಗಳಲ್ಲಿ ಇವೂ ಒಂದಾಗಿವೆ.
ಇದನ್ನೂ ಓದಿ : Afghanistan: ಅಫ್ಘನ್ ಸರ್ಕಾರಕ್ಕೆ 2 ವರ್ಷ; ತಾಲಿಬಾನ್ ಸಂಭ್ರಮಾಚರಣೆ - ಕೇಳುವವರಿಲ್ಲ ಮಹಿಳೆಯರ ಸಂಕಷ್ಟ!